ಹುಬ್ಬಳ್ಳಿ: ಹುಬ್ಬಳ್ಳಿ ಯ ಗ್ರೋ ಗ್ರೀನ್ ಪೆಡಲರ್ಸ್ ವತಿಯಿಂದ ಧಾರವಾಡ ತಾಲೂಕು ಗರಗ ಕ್ಷೇತ್ರೀಯ ಸೇವಾ ಸಂಘದ ರಾಷ್ಟ್ರ ಧ್ವಜ ತಯಾರಿಕಾ ಘಟಕದಲ್ಲಿ ಗಣರಾಜ್ಯೋತ್ಸವ ವನ್ನು ಶುಕ್ರವಾರ ವಿಶಿಷ್ಠವಾಗಿ ಆಚರಿಸಲಾಯಿತು. ಪೆಡಲರ್ಸ್ ವತಿಯಿಂದ ಸಂಘದ ಆವರಣದಲ್ಲಿ ಸಸಿ ನೆಡುವುದಲ್ಲದೇ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಸಸಿ ಹಾಗೂ ಸಿಹಿ ವಿತರಿಸಲಾಯಿತು. ಸಂಘದಿಂದಲೂ ಪೆಡಲರ್ಸ್ ಪದಾಧಿಕಾರಿಗಳಿಗೆ ಗೌರವ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಈಶ್ವರಪ್ಪ ಇಟಗಿ ಮಾತನಾಡಿ, ರಾಷ್ಟ್ರ ಪ್ರೇಮ ಬರೀ ಉದ್ಘೋಷದಿಂದ ಮಾತ್ರ ಬಂದರೆ ಸಾಲದು, ಅಂತರಾತ್ಮದಿಂದ ಅದು ಹೊರಹೊಮ್ಮಬೇಕು. ಸಣ್ಣ ಸೇವೆಯೂ ರಾಷ್ಟ್ರ ಕ್ಕೆ ಸಮರ್ಪಣೆ ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ ಮಾತನಾಡಿ, ನಾವೆಲ್ಲರೂ ಭಾರತೀಯರೆಂಬ ಹೆಮ್ಮೆ ಚಿರಸ್ಥಾಯಿಯಾಗಿ ಉಳಿಸಿಕೊಳ್ಳಬೇಕು. ಸಮಾಜ ಸೇವೆ ಮೂಲಕ ಅತ್ಯಂತ ಹಿಂದುಳಿದವರ ಏಳ್ಗೆಗೆ ಶ್ರಮಿಸಬೇಕು ಎಂದರು. ಗ್ರೋ ಗ್ರೀನ್ ಪೆಡಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಮಾತನಾಡಿ, ಗರಗ ಸಂಘದಲ್ಲಿ ರಾಷ್ಟ್ರ ಧ್ವಜ ತಯಾರಿಸುತ್ತಿರುವುದು ನೋಡಿ ಖುಷಿ ಅಯಿತು. ದೇಶದ ಅಭ್ಯುದಯದಲ್ಲಿ ಧಾರವಾಡ ಜಿಲ್ಲೆಯ ಕೊಡುಗೆ ಇರುವುದು ನಮ್ಮ ಸೌಭಾಗ್ಯ ಎಂದು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚoದ್ರ ಡಂಗನವರ, ಪ್ರವೀಣ್ ಹಟ್ಟಿಹೋಳಿ, ರಾಜು ರಾಜೋಳಿ, ವೃಷಭ ಡಂಗನವರ, ಸಂಘದ ಪದಾಧಿಕಾರಿಗಳಾದ ರಾಜೇಶ ಕಳಸಗಾರ, ಐ.ಎಸ್. ಕಾಕೂರ, ಎಂ.ಬಿ. ಮಡಿವಾಳರ, ಯಲ್ಲಪ್ಪ ಏಕಬೋಟೆ, ಮಂಜುಳಾ ಮಠಪತಿ, ಇತರರು ಸಂಭ್ರಮದಲ್ಲಿ ಭಾಗಿಯಾಗಿದ್ದರು.