24.4 C
Karnataka
Thursday, May 7, 2026
spot_img

ಹುಬ್ಬಳ್ಳಿ ಧಾರವಾಡ ನಾಗರಿಕರ ಬಳಗದ ಸದಸ್ಯರ ಸಮ್ಮಿಲನ ಮತ್ತು ಕ್ಯಾಲೆಂಡರ್ ಬಿಡುಗಡೆ

ಹುಬ್ಬಳ್ಳಿ. 1 -ಸತತವಾಗಿ ಕಳೆದೆರಡು ವರ್ಷಗಳಿಂದ ಕರ್ನಾಟಕ ನಾಗರಿಕರ ವಾರ್ಡ್ ಸಮಿತಿ ಬಳಗದ ಆಶ್ರಯದಲ್ಲಿ ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗವು ಶಾಸನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಕಡ್ಡಾಯವಾಗಿ ಪಾಲಿಕೆಯಿಂದ ರಚಿಸಲೇಬೇಕಾದ ನಾಗರಿಕರ ವಾರ್ಡ್ ಸಮಿತಿಗಳನ್ನು ರಚಿಸುವಂತೆ ಆಗ್ರಹಿಸಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನ ಸೆಳೆಯಲು ಮನವಿ ಪತ್ರಗಳ ಸಲ್ಲಿಕೆ ಸೈಕಲ್ ಜಾಥಾ, ಸ್ವಚ್ಛತಾ ಅಭಿಯಾನಗಳು, ನಾಗರಿಕರ ವಾರ್ಡ್ ಸಮಿತಿ ಕುರಿತು ವಲಯವಾರು ನಾಗರಿಕರ ಜಾಗೃತಿ ಶಿಬಿರಗಳನ್ನು, ಪ್ರತಿಭಟನೆಗಳನ್ನು, ಸರಣಿ ಉಪವಾಸ ಸತ್ಯಾಗ್ರಹಗಳನ್ನು ಆಯೋಜಿಸುತ್ತಲೇ ಬಂದಿದೆ.

ಸತತವಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕಳೆದ ಮೂರು ಜನತಾದರ್ಶನ ಕಾರ್ಯಕ್ರಮದಲ್ಲೂ ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗವು ಮನವಿ ಪತ್ರ ಅರ್ಪಿಸಿದೆ. ಬಳಗದ ನಿಯೋಗವು ಬೆಂಗಳೂರಿನ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು, ಪೌರಾಡಳಿತ ಸಚಿವರು ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಅತೀ ಶೀಘ್ರದಲ್ಲಿ ನಾಗರಿಕರ ವಾರ್ಡ್ ಸಮಿತಿಗಳನ್ನು ರಚಿಸುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಬೇಕೆಂದು ಆಗ್ರಹಿಸಿ ಮನವಿ ಪತ್ರಗಳನ್ನು ಅರ್ಪಿಸಿದೆ.

ಈಗ ವಿನೂತನವಾಗಿ ಹೊಸ ವರ್ಷವನ್ನು ಸ್ವಾಗತಿಸಲು ಹುಬ್ಬಳ್ಳಿ ಧಾರವಾಡ ನಾಗರಿಕರ ಬಳಗದ ಸದಸ್ಯರ ಸಮ್ಮಿಲನ ಮತ್ತು ನಾಗರಿಕರಿಗೆ ಉಪಯೋಗವಾಗುವ ಸಹಾಯವಾಣಿ ದಿನದರ್ಶಿಕೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಇದೇ ಜನವರಿ 2 ರಂದು ಬೆಳಿಗ್ಗೆ 10:30 ಕ್ಕೆ ಸಿದ್ದಾರೂಢ ಮಠದ ಟ್ರಸ್ಟ್ ಆಫೀಸಿನ ಮೇಲ್ಗಡೆ ಇರುವ ಸಭಾಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. 

ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ನಗರ ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು, ಕಿಮ್ಸ್ ನಿರ್ದೇಶಕರು,  ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು, ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರು, ವಿಜಯ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರು, ಕಾನೂನು ಸಲಹೆಗಾರರಾದ ಕಲ್ಮೇಶ್ ಹಾವೇರಿಪೇಟ್ ಅವರು, ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಛೇರ್ಮನ್ನರು, ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ರಾಷ್ಟ್ರೀಯ ಮುಖ್ಯಸ್ಥರು, ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಅಹ್ವಾನಿಸಲಾಗಿದೆ. ಅವಳಿ ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗದ ಸಂಚಾಲಕರಾದ ಲಿಂಗರಾಜ ಧಾರವಾಡಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!