ಬೆಂಗಳೂರು, ಅಕ್ಟೋಬರ್ 26 (ಕರ್ನಾಟಕ ವಾರ್ತೆ):
ವೃತ್ತಿ ಜೀವನದಲ್ಲಿ ಸಹಕರಿಸಿದ ಪ್ರತಿಯೊಬ್ಬ ನ್ಯಾಯಾಧೀಶರು, ವಕೀಲರು ಅಲ್ಲದೆ ಕುಟುಂಬ ವರ್ಗದವರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಕರಾಗಿ ನೇಮಕಗೊಂಡಿರುವ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ತಿಳಿಸಿದರು.
ಅವರು ಇಂದು ಕರ್ನಾಟಕ ಉಚ್ಛ ನ್ಯಾಯಾಲಯದ ಕೋರ್ಟ್ ಹಾಲ್-1 ರಲ್ಲಿ ಸ್ವಾಗತ ಸ್ವೀಕರಿಸಿ ಮಾತನಾಡಿದರು.
ನ್ಯಾಯಾಧೀಶರಾಗಿ ಸಮಾಜ ಸುಧಾರಣೆಗೆ ನ್ಯಾಯಾಂಗ ವ್ಯವಸ್ಥೆ ಬಹುಮುಖ್ಯ ಪಾತ್ರವಹಿಸುತ್ತದೆ. ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ವಕೀಲರು, ನ್ಯಾಯಾಧೀಶರ ಕೊಡುಗೆ ಅಪಾರ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ಹೆಚ್.ಎಲ್. ವಿಶಾಲ್ ರಘು ಅವರು ಸ್ವಾಗತ ಭಾಷಣ ಮಾಡಿ ಕೋಲಾರ ಜಿಲ್ಲೆಯಲ್ಲಿ ಜನಿಸಿದ ಕುರುಬರಹಳ್ಳಿ ವೆಂಕಟರಾಮ ರೆಡ್ಡಿ ಅರವಿಂದ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. 2000 ಇಸವಿಯಿಂದ ವಕೀಲ ವೃತ್ತಿ ಆರಂಭಿಸಿದರು. ಗ್ರಾಹಕ ವ್ಯಾಜ್ಯಗಳ ಪರಿಣಿತ ಹೊಂದಿದ ಇವರು ಕಿದ್ವಾಯಿ ಆಸ್ಪತ್ರೆ, ಸಿಲ್ಕ್ ಬೋರ್ಡ್ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಶ್ರಮಿಸಿದರು. 2004ರಿಂದ ಆದಾಯ ತೆರಿಗೆ ಸಂಬಂಧಿಸಿದಂತೆ ಪರಿಣಿತಿ ಪಡೆದು 2012 ರಲ್ಲಿ ಸ್ವಂತ ಕಚೇರಿ ನಿರ್ವಹಿಸಿದರು. ಆದಾಯ ತೆರಿಗೆಯ ಹಿರಿಯ ಸ್ಥಾಯಿ ಸಮಿತಿ ವಕೀಲರಾಗಿ ಕೆಲಸ ನಿರ್ವಹಿಸಿದರು. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ. ವರಾಳೆ ಸೇರಿದಂತೆ ಹಿರಿಯ ನ್ಯಾಯಮೂರ್ತಿಗಳು, ವಕೀಲರು ಉಪಸ್ಥಿತರಿದ್ದರು.