ಹುಬ್ಬಳ್ಳಿ (ಕರ್ನಾಟಕವಾರ್ತೆ) ಅ.7: 2023-24 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಮಂಜೂರು ಮಾಡಲು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (ಎಸ್.ಎಸ್.ಪಿ) ನಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
2023-24 ನೇ ಸಾಲಿನಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಎಸ್.ಎಸ್.ಪಿ ಮೂಲಕ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಇದುವರೆಗೆ ಆನ್‍ಲೈನ್ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆನ್‍ಲೈನ್ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ ವಿಳಾಸ www.sw.kar.nic.in (https://ssp.postmatric.karnataka.gov.in/homepage.aspx)
ನ್ನು ಪ್ರವೇಶಿಸಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 2023-24 ನ್ನು ಆಯ್ದುಕೊಂಡು ಅರ್ಜಿ ಸಲ್ಲಿಸಬೇಕು.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡಿಸಿರಬೇಕು. ಇದುವರೆಗೂ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡಿಸದಿರುವ ವಿದ್ಯಾರ್ಥಿಗಳು ಕೂಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರನ್ನು NPCI ಜೋಡಣೆ ಮಾಡಿಸಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ಹುಬ್ಬಳ್ಳಿ ದೂರವಾಣಿ ಸಂಖ್ಯೆ 0836-2278066 ಕ್ಕೆ ಸಂಪರ್ಕಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.