ಬೆಂಗಳೂರು, ಡಿಸೆಂಬರ್ 31 (ಕರ್ನಾಟಕ ವಾರ್ತೆ):
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಖುಷ್ಕಿ ಬೇಸಾಯ ಪ್ರಾಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿಯ ಶಿವಗಂಗಾ ರೈತ ಉತ್ಪಾದಕರ ಸಂಸ್ಥೆ ನಿಯಮಿತ ಇವರ ಸಹಯೋಗದೊಂದಿಗೆ ಕೆಂಪಲಿಂಗನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಮಣ್ಣು ದಿನಾಚರಣೆ’ ಕಾರ್ಯಕ್ರಮವನ್ನು ಖುಷ್ಕಿ ಬೇಸಾಯ ಪ್ರಾಯೋಜನೆಯ ಮುಖ್ಯ ವಿಜ್ಞಾನಿ ಡಾ. ಮೂಡಲಗಿರಿಯಪ್ಪ ಅವರು ನಡೆಸಿ ಕೊಟ್ಟರು.
ರೈತರು ಮಣ್ಣು ಆರೋಗ್ಯಕ್ಕೆ ಹೆಚ್ಚು ಗಮನವರಿಸಬೇಕು ಅದರಲ್ಲೂ ಖುಷ್ಕಿ ಬೇಸಾಯದಲ್ಲಿ ಮಣ್ಣುಗಳಲ್ಲಿ ಪೋಷಕಾಂಶ ನಿರ್ವಹಣೆ ಹಾಗೂ ಬೆಳೆಯುವಂತಹ ಬೆಳೆಗಳು ಹೆಚ್ಚು ಮುಖ್ಯವಾಗಿದ್ದು ಬೆಳೆಯ ಉತ್ಪಾದಕತೆ ಹೆಚ್ಚಿಸಲು ಮಣ್ಣಿನ ಪೋಷಣೆ ಬಹಳ ಮುಖ್ಯವಾದ ಅಂಶ ಎಂದು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ರೈತರಿಗೆ ಮನವರಿಕೆ ಮಾಡಿದರು.
ಖುಷ್ಕಿ ಬೇಸಾಯ ಪ್ರಾಯೋಜನೆಯ ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ) ಡಾ.ಬಿ.ಜಿ. ವಾಸಂತಿ, ಅವರು ಮಾತನಾಡಿ, ಮಣ್ಣು ಪರೀಕ್ಷೆ ಕ್ರಮ ಹಾಗೂ ಅದರ ಮಹತ್ವದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟು ಪೋಷಕಾಂಶ ನಿರ್ವಹಣೆ ಹಾಗೂ ಸಾವಯವ ಗೊಬ್ಬರ ಬಳಕೆಯು ಮಣ್ಣಿನ ಆರೋಗ್ಯ ಹೆಚ್ಚಿಸಲು ಒಂದು ಕೇಂದ್ರ ಬಿಂದು ಎಂದು ಹೇಳಿದರು.