ಹುಬ್ಬಳ್ಳಿ(ಕರ್ನಾಟಕ ವಾರ್ತೆ)ಜ.25 ಮತದಾನ ಮಾಡುವುದು ಎಲ್ಲರ ಹಕ್ಕು. ಮತದಾನದಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಯುವ ಜನರು ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ.ಡಿ.ಆರಿ ಹೇಳಿದರು.
ಇಂದು ವಿದ್ಯಾ ನಗರದ ಬಿ.ವಿ.ಬಿ.ತಾಂತ್ರಿಕ ಮಹಾವಿದ್ಯಾಲಯದ ಬಿಟೆಕ್ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ತಾಲೂಕು ಕಾನೂನು ಸೇವಾ ಸಮಿತಿ ಹುಬ್ಬಳ್ಳಿ ಮತ್ತು ಬಿ.ವಿ.ಬಿ.ತಾಂತ್ರಿಕ ಮಹಾವಿದ್ಯಾಲಯ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಮುಂದಿನ ಭವಿಷ್ಯ ಯುವ ಮತದಾರರಲ್ಲಿದೆ. ಮತ ಚಲಾಯಿಸುವ ಸಂದರ್ಭದಲ್ಲಿ ಉತ್ತಮ ನಾಯಕ, ಸಮಾಜದ ಏಳಿಗೆಗೆ ಶ್ರಮಸಬಲ್ಲಂತಹ ನಾಯಕನಿಗೆ ಮತ ಹಾಕಬೇಕು. ಯಾವ ದೇಶದಲ್ಲಿ ದೇವಸ್ಥಾನಗಳ ಘಂಟೆಗಳ ಶಬ್ಧಕ್ಕಿಂತ ಶಾಲೆಗಳ ಘಂಟೆಗಳ ಶಬ್ದ ಹೆಚ್ಚಾಗಿ ಕೇಳಿಸುತ್ತದೆಯೋ ಆ ದೇಶ ಅಭಿವೃದ್ಧಿಯಾಗಲು ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಕಳೆದ 4 ರಿಂದ 5 ತಿಂಗಳಲ್ಲಿ ಬಿ.ಎಲ್.ಒ ಗಳಿಂದ ಮನೆ ಮನೆಗಳಿಗೆ ತೆರಳಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಪ್ರಜೆಯು ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು.
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಯುವ ಮತದಾರರಿಗೆ ಮತದಾನದ ಕುರಿತು ಅರಿವು ಮೂಡಿಸಲಾಗಿರುತ್ತದೆ. ಬ್ರಿಟಿಷರ ಅಧೀನದಲ್ಲಿದ್ದ ಭಾರತ ಬ್ರಿಟಿಷರ ಆಡಳಿತದ ನಂತರದಲ್ಲಿ ಭಾರತದ ಆಡಳಿತ ಒಂದು ಒಳ್ಳೆಯ ಪ್ರಜಾಪ್ರಭುತ್ವವನ್ನು ಪಡೆಯಿತು. ಭಾರತ ಪ್ರಜಾಪ್ರಭುತ್ವ ದೇಶವಾಗಿ ಗುರುತಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ವಿ.ಬಿ. ತಾಂತ್ರಿಕ ಮಹಾವಿದ್ಯಾಲಯದ ಕುಲಪತಿಗಳಾದ ಡಾ.ಅಶೋಕ್.ಎಸ್.ಶೆಟ್ಟರ್ , ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ದಿವಾಣಿ ನ್ಯಾಯಾಧೀಶರಾದ ರಾಜಶೇಖರ್ ತಿಳಗಂಜಿ, ಹುಬ್ಬಳ್ಳಿ ನಗರ ತಹಶೀಲ್ದಾರರಾದ ಕಲಗೌಡ್ ಪಾಟೀಲ್, ಹುಬ್ಬಳ್ಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿ ಇತರರು ಉಪಸ್ಥಿತರಿದ್ದರು.