ಬೆಂಗಳೂರು, ಜನವರಿ 24 (ಕರ್ನಾಟಕ ವಾರ್ತೆ):
ಬೆಂಗಳೂರು ನಗರ ಜಿಲ್ಲೆ – 5 ರ ಅಬಕಾರಿ ಉಪ ಆಯುಕ್ತರಾದ ವೀರಣ್ಣ ಬಾಗೇವಾಡಿ ಇವರ ಮಾರ್ಗದರ್ಶನದಲ್ಲಿ ಉಪವಿಭಾಗ-10ರ ಅಬಕಾರಿ ಉಪ ಅಧೀಕ್ಷಕರಾದ ದೇವರಾಜ್ ಇವರ ನೇತೃತ್ವದಲ್ಲಿ ವಲಯ-30ರ ಅಬಕಾರಿ ನಿರೀಕ್ಷಕರಾದ ಅಬುಬಕರ್ ಮುಜಾವರ, ಮತ್ತು ಸಿಬ್ಬಂದಿಗಳು ಮಹದೇವಪುರ ವ್ಯಾಪ್ತಿಯ ದೂರವಾಣಿನಗರದ ಬಿಎಂಟಿಸಿ ಡಿಪೋ 24ರ ಹತ್ತಿರ ಜನವರಿ 23 ರಂದು ದಾಳಿ ನಡೆಸಿ, ಗೋವಾ ರಾಜ್ಯದಿಂದ ಯಾರಿಗೂ ತಿಳಿಯದಂತೆ ಮೇಲ್ಚಾವಣಿಯಲ್ಲಿ ನಿರ್ಮಿಸಿದ ಗೌಪ್ಯ ಸ್ಥಳದಲ್ಲಿ ನಿರ್ಮಿಸಿದ ಜಾಗದಲ್ಲಿ ಲೈಟ್ ಹೋರ್ಸ್ ಹಾಗೂ ರಾಯಲ್ ಸ್ಟ್ಯಾಗ್ ವಿಸ್ಕಿ ಬ್ರ್ಯಾಂಡ್ ಅನ್ನು 375 ಬಾಕ್ಸ್‍ಗಳಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ 3240 ಲೀಟರ್ ಮೇಲ್ನೋಟಕ್ಕೆ ನಕಲಿಯಂತೆ ಕಾಣುವ ಮದ್ಯವನ್ನು ಹಾಗೂ ಸಾಗಾಟಕ್ಕೆ ಬಳಸಿದ್ದ ಕೆಎ 36- 8781 ನೋಂದಣಿ ಸಂಖ್ಯೆಯ ಹತ್ತು ಚಕ್ರದ ಲಾರಿಯನ್ನು ಜಪ್ತಿ ಮಾಡಲಾಗಿದೆ.
ಮಧ್ಯ ಸಾಗಾಟ ಮಾಡುತ್ತಿದ್ದ ಬೆಳಗಾವಿ ಮೂಲದ ಆರೋಪಿಗಳಾದ ಪರಮೇಶ್ವರ್ ದೇವಪ್ಪ ನಾಯಕ ಹಾಗೂ ವಾಹನ ಚಾಲಕ ಅಮೀತ ಪಡತಾರೆ ಎಂಬುವವರ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ-05 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.