ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.2: ಸಾರ್ವಜನಿಕರು ಸೇರಿದಂತೆ ವಿಕಲಚೇತನರು ಸಹ ಮತದಾನದಿಂದ ವಂಚಿತರಾಗರಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಮಟ್ಟದಲ್ಲಿವೂ ಸಹ ತಪ್ಪದೇ ಹೊಸ ಮತದಾರರು ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕುರ್ತಕೋಟಿ ಹೇಳಿದರು.
ಇಂದು ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆದ ಹುಬ್ಬಳ್ಳಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಧಾರವಾಡ ಇವರ ವತಿಯಿಂದ ಮತದಾರರ ನೊಂದಾಣಿಯ ಜಾಗೃತಿ ಕಾರ್ಯಕ್ರಮ ಮತ್ತು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಚುನಾವಣೆಯಲ್ಲಿ ಯಾವುದೇ ಪ್ರಜೆಗಳು ಮತದಾನದಿಂದ ದೂರ ಉಳಿಯಬಾರದು ತಮ್ಮ ಹಕ್ಕನ್ನು ಮತದಾನ ಮಾಡುವ ಮೂಲಕ ಚಲಾಯಿಸಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯವನ್ನು ಎತ್ತಿಹಿಡಿಯಲು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಜಾಗೃತಿ ಮೂಡಿಸಿ, ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರೇರಿಪಿಸಬೇಕು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಎಸ್. ವಿ ಬಂಗಾರಿಮಠ ಮಾತನಾಡಿ, ಯಾವುದೇ ಚುನಾವಣೆಯಲ್ಲಿ ಗರಿಷ್ಠ ಮತದಾನವಾಗಬೇಕು ಮತ್ತು ಒಂದೇ ಒಂದು ಮತವೂ ನಿರ್ಣಾಯಕವಾಗಿರುವುದರಿಂದ 18 ವರ್ಷ ಮೇಲ್ಪಟ್ಟ ವಿಕಲಚೇತನ ಯುವಕ-ಯುವತಿಯರಿಗೆ ಮತದಾರರ ನೊಂದಾಣಿ ಪ್ರಕ್ರಿಯೆಯನ್ನು ಹುಬ್ಬಳ್ಳಿ ತಾಲ್ಲೂಕು ಪಂಚಾಯತ್ ವತಿಯಿಂದ ಆರಂಭಿಸಿದೆ. ಹೊಸ ಮತದಾರರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ ವ್ಯವಸ್ಥಾಪಕ ಶಿವಾನಂದ ನಸಬಿ, ತಾ.ಪಂ ವಿವಿಧ್ಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ, ಎಲ್ಲ ಗ್ರಾ.ಪಂ ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.