ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ):
ಧಾರವಾಡದಲ್ಲಿ ಡಿಸೆಂಬರ್ 23 ಹಾಗೂ 24 ರಂದು ಜರುಗಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಕ್ರೀಡಾಕೂಟದ ಕ್ರಿಕೆಟ್‍ನಲ್ಲಿ ಬೆಂಗಳೂರು ಚಾಲೆಂಜರ್ಸ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್‍ಶಿಪ್ ಪಡೆಯಿತು.
ಧಾರವಾಡದ ಕರ್ನಾಟಕ ಕಾಲೇಜು, ಕರ್ನಾಟಕ ವಿವಿ, ಪೆÇಲೀಸ್ ಹೆಡ್ ಕ್ವಾಟರ್ಸ್ ಮೈದಾನಗಳಲ್ಲಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 25 ತಂಡಗಳು ಭಾಗವಹಿಸಿದ್ದವು.
ಮೈಸೂರು ಹಾಗೂ ಬೆಂಗಳೂರು ಚಾಲೆಂಜರ್ಸ್ ತಂಡಗಳ ಮಧ್ಯೆ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡವು 8 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತು. ನಂತರ ಬ್ಯಾಟಿಂಗ್ ಪ್ರದರ್ಶಿಸಿದ ಬೆಂಗಳೂರು ಚಾಲೆಂಜರ್ಸ್ ತಂಡವು 6.3 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಪ್ರಶಸ್ತಿ ಪಡೆಯಿತು. ತಂಡವು ಸತತ ಎರಡನೇ ಬಾರಿಗೆ ಈ ಟ್ರೋಫಿ ಮುಡಿಗೇರಿಸಿಕೊಂಡಿದೆ.
ವಿಜೇತರಿಗೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ದೀಪಕ್ ದೊರೆಯವರ್ ಹಾಗೂ ಅಂತಾರಾಷ್ಟ್ರೀಯ ವಿಕಲಚೇತನರ ಅಥ್ಲೀಟ್ ತರಬೇತುದಾರ ಶಿವಾನಂದ ಎಂ.ಗುಂಜಳ ಮತ್ತು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಂಘದ ಅಧ್ಯಕ್ಷ ಶ್ರೀಕೃಷ್ಣ ಬುಗಟ್ಯಾಗೋಳ ಅವರು, ಟ್ರೋಫಿ, ಆವರ್ತಕ ಶೀಲ್ಡ್ ಹಾಗೂ ಪದಕಗಳನ್ನು ನೀಡಿ ಗೌರವಿಸಿದರು. ಬೆಂಗಳೂರು ಚಾಲೆಂಜರ್ಸ್ ತಂಡದ ನಾಯಕ ಮದನ್ ರಾಜ್ ಅರಸ್, ಉಪನಾಯಕ ವಿ.ಶೇಖರ್, ಮ್ಯಾನೇಜರ್ ಮಹದೇವ (ಅಪರ ನಿರ್ದೇಶಕರು) ಮತ್ತು ತಂಡದ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.
ಇಲಾಖಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜನೆಗೊಳಿಸಿ ಕಾರ್ಯನಿರ್ವಹಿಸಿದ ಧಾರವಾಡ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.
ಹೊರಾಂಗಣ ಕ್ರೀಡೆಗಳಾದ ರನ್ನಿಂಗ್, ಷಟಲ್ ಬ್ಯಾಡ್ಮಿಂಟನ್, ಗುಂಡು ಎಸೆತ, ಒಳಾಂಗಣ ಕ್ರೀಡೆಗಳಾದ ಚದುರಂಗ, ಕೇರಂ ಮತ್ತಿತರ ಆಟಗಳು ಜರುಗಿದವು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 400 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.