ಬೆಂಗಳೂರು, ಮಾರ್ಚ್ ೨೧ (ಕರ್ನಾಟಕ ವಾರ್ತೆ) :
ನ್ಯಾಯಾಂಗ ವ್ಯವಸ್ಥೆಗೆ ಎಐ (ಕೃತಕ ಬುದ್ಧಿಮತ್ತೆ) ತಾಂತ್ರಿಕತೆಯನ್ನು ಸಂಯೋಜನೆಗೊಳಿಸುವಾಗ ಅದು ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ರೀತಿಯಲ್ಲಿ ಇರಬೇಕೇ ಹೊರತು ಅದರ ಮೇಲೆಯೇ ಸವಾರಿ ಮಾಡುವಂತಿರಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಪ್ರತಿಪಾದಿಸಿದರು.
‘ಕೃತಕ ಬುದ್ಧಿಮತ್ತೆ- ವ್ಯಾಜ್ಯಗಳ ತಡೆಗಟ್ಟುವಿಕೆ ಮತ್ತು ಇತ್ಯರ್ಥ’ ಕುರಿತು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಸಭಾಂಗಣದಲ್ಲಿ ಯುಐಎ ಇಂಡಿಯಾ ಅಧ್ಯಾಯ, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಗಾಧ ಪ್ರಮಾಣದ ದತ್ತಾಂಶ-ದಾಖಲಾತಿಗಳನ್ನು ನಿರ್ವಹಿಸಲು, ಮಾದರಿಗಳನ್ನು ಗುರುತಿಸಲು, ಪ್ರಕ್ರಿಯೆಗಳ ವಿಳಂಬವನ್ನು ತಗ್ಗಿಸಲು ಎಐ ಸಹಾಯಕವಾಗಬೇಕು. ಆದರೆ, ಪ್ರಧಾನ ಕಾರ್ಯವಾದ ತೀರ್ಪು ಪ್ರಕಟಿಸುವಿಕೆಯನ್ನೇ ಅದು ಅತಿಕ್ರಮಿಸುವಂತಾಗಬಾರದು. ತೀರ್ಪು ಪ್ರಕಟಿಸುವಿಕೆಯ ಹಂತದ ಮೇಲೆ ಎಐ ಸಾಧನಗಳಿಗೆ ಹಿಡಿತ ಸಾಧಿಸಲು ಆಸ್ಪದ ಮಾಡಿಕೊಟ್ಟರೆ ಪಾರದರ್ಶಕವಲ್ಲದ ಹಾಗೂ ಉತ್ತರದಾಯಿಯಲ್ಲದ ವ್ಯವಸ್ಥೆ ನಿರ್ಮಾಣವಾಗಲು ನಾವು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸೂರ್ಯಕಾಂತ್ ಅವರು ಎಚ್ಚರಿಸಿದರು.
ನ್ಯಾಯಾಂಗ ಪ್ರಕ್ರಿಯೆಯ ಅಂತಿಮ ಘಟ್ಟವಾದ ತೀರ್ಪು ಪ್ರಕಟಿಸುವಿಕೆಯಲ್ಲಿ ಮನುಷ್ಯರೇ ನಿರ್ಣಾಯಕ ಪಾತ್ರ ವಹಿಸುವಂತಿರಬೇಕು. ಅಂದರೆ, ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರುಗಳೇ ತರ್ಕ ಶಕ್ತಿ ಹಾಗೂ ಅನುಭವಗಳ ವಿಶ್ಲೇಷಣೆಯ ಬೆಳಕಿನಲ್ಲಿ ತೀರ್ಪುಗಳನ್ನು ಪ್ರಕಟಿಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ತರುವ ಪ್ರಯೋಜನಗಳು ಮಾರ್ಗಗಳಾಗಿ ಮಾತ್ರವೇ ಬಳಕೆಯಾಗಬೇಕು. ಆದರೆ, ಯಾವ ದಿಕ್ಕಿನತ್ತ ಸಾಗಬೇಕು ಎಂಬ ದಿಕ್ಸೂಚಿಯ ಪಾತ್ರವನ್ನು ಮನುಷ್ಯನ ಬುದ್ಧಿಯೇ ನಿರ್ಧರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಗೌರವ ಅತಿಥಿಯಾಗಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯನ್ನು ಎಐ ಪ್ರವೇಶಿಸಿರುವ ಈ ಸಂದರ್ಭದಲ್ಲಿ, ಮನುಷ್ಯನ ನಿರ್ಧಾರ ತಳೆಯುವ ಶಕ್ತಿಗೆ ಎಐ ಸಹಾಯಕನಂತೆ ವರ್ತಿಸುತ್ತಿದೆಯೇ ಅಥವಾ ಮನುಷ್ಯನ ಉಪಸ್ಥಿತಿಯ ಅಗತ್ಯವೇ ಇಲ್ಲದ ಪರ್ಯಾಯದಂತೆ ಗೋಚರಿಸುತ್ತಿದೆಯೇ?, ಇದು ಜನರಿಗೆ ನ್ಯಾಯಿಕ ವ್ಯವಸ್ಥೆಯನ್ನು ಇನಷ್ಟು ಸುಲಭವಾಗಿ ಲಭ್ಯವಾಗಿಸುತ್ತದೆಯೇ ಅಥವಾ, ಹೊಸ ಸ್ವರೂಪದ ಅಸಮಾನತೆಗಳನ್ನು ಹಾಗೂ ಅಪಾರದರ್ಶಕತೆಯನ್ನು ಉಂಟುಮಾಡುತ್ತದೆಯೇ? ಇಂಬಂತಹ ಪ್ರಮುಖ ಪ್ರಶ್ನೆಗಳು ಈಗ ಎದುರಾಗಿವೆ ಎಂದರು.
ಎಐ ತಾಂತ್ರಿಕತೆಯಿಂದ ಕೆಲವು ಕ್ರಾಂತಿಕಾರಿ ಪ್ರಯೋಜನಗಳು ಕೂಡ ಆಗುತ್ತಿವೆ. ಮಾದರಿಗಳ ವಿಶ್ಲೇಷಣೆಯನ್ನು ಸಾಧ್ಯವಾಗಿಸುವ ಮೂಲಕ ಭವಿಷ್ಯದಲ್ಲಿ ತಲೆದೋರಬಹುದಾದ ವ್ಯಾಜ್ಯಗಳನ್ನು ಎಐ ನೆರವಿನಿಂದ ಮುಂಚಿತವಾಗಿಯೇ ಊಹಿಸುವುದು ಸಾಧ್ಯವಾಗಿದೆ. ಇದರಿಂದ ನ್ಯಾಯಾಂಗ ವ್ಯವಸ್ಥೆಯ ದಕ್ಷತೆ ಹೆಚ್ಚಲಿದೆ. ಎಐ ಬೆಂಬಲಿತ ಆನ್ ಲೈನ್ ಡಿಸ್ಪ್ಯೂಟ್ ರೆಸಲ್ಯೂಷನ್ ವೇದಿಕೆಯಿಂದಾಗಿ ಕಡಿಮೆ ಖರ್ಚಿನಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಅನುಕೂಲವಾಗಲಿದೆ. ರಾಜಿ ಸಂಧಾನಗಳ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವುದಕ್ಕೂ ಇದು ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ನ್ಯಾಯಾಂಗ ಸ್ವಾತಂತ್ರ್ಯ, ಪಾರದರ್ಶಕತೆ ಹಾಗೂ ಕಾನೂನುಬದ್ಧತೆಯ ಅಂಶಗಳು ಈಗ ಅತ್ಯಂತ ಪ್ರಮುಖವಾಗಿ ಪರಿಣಮಿಸಿವೆ. ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಎಐ ಬಳಕೆಯು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ತತ್ತ್ವಗಳು ಹಾಗೂ ಸೂಕ್ತ ರಕ್ಷಣೆಗಳೊಂದಿಗೆ ನಿರ್ದೇಶಿತವಾಗಬೇಕು. ವಕೀಲರು ಕೂಡ ಎಐ ಟೂಲ್ ಗಳ ಮಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆಯ ಪ್ರಧಾನ ಘಟಕಗಳಾದ ಪ್ರಾಮಾಣಿಕತೆ ಮತ್ತು ಜವಾಬ್ದಾರಿಗಳು ಅಬಾಧಿತವಾಗಿ ಮುಂದುವರಿಯಬೇಕು ಎಂದರು.
ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಅವರು ಮಾತನಾಡಿ, ಎಐ ತಂತ್ರಜ್ಞಾನದಿಂದಾಗಿ ನ್ಯಾಯಾಲಯದ ತೀರ್ಪುಗಳನ್ನು ತ್ವರಿತವಾಗಿ ಸ್ಥಳೀಯ ಭಾಷೆಗಳಿಗೆ ಅನುವಾದ ಮಾಡುವುದು ಸಾಧ್ಯವಾಗುತ್ತಿದ್ದು, ಇದರಿಂದಾಗಿ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಆಸಕ್ತಿಯಿರುವ ಹಳ್ಳಿಯ ಜನರೂ ಓದಬಹುದಾಗಿದೆ. ಇದು ವಕೀಲರಿಗೆ ತಮ್ಮ ಕಕ್ಷಿದಾರರೊಂದಿಗೆ ವ್ಯವಹರಿಸಲು ಅನುಕೂಲ ಕಲ್ಪಿಸಲಿದೆ ಎಂದರು.
ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹಾಗೂ ಯುಐಎನ ಅಧ್ಯಕ್ಷರಾದ ಕೆ.ಕೆ. ವೇಣುಗೋಪಲ್ ಅವರ ಸಂದೇಶಗಳನ್ನು ವಿಡಿಯೋ ವ್ಯವಸ್ಥೆಯ ಮೂಲಕ ಬಿತ್ತರಿಸಲಾಯಿತು.
ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ, ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ಯುಐಎ ಇಂಡಿಯಾ ಅಧ್ಯಕ್ಷರಾದ ಎ.ಕೆ. ಗಂಗೂಲಿ, ಹಿರಿಯ ವಕೀಲರಾದ ಕೃಷ್ಣನ್ ವೇಣುಗೋಪಾಲ್, ವಕೀಲೆ ಮತ್ತು ಯುಐಎ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮಮತಾ ತಿವಾರಿ ಮತ್ತಿತರ ಗಣ್ಯರು, ಹಿರಿಯ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇಂದು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ‘ಕೃತಕ ಬುದ್ಧಿಮತ್ತೆ- ವ್ಯಾಜ್ಯಗಳ ತಡೆಗಟ್ಟುವಿಕೆ ಮತ್ತು ಇತ್ಯರ್ಥ’ ಎಂಬ ವಿಷಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ, ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ವಿಭು ಬಖ್ರು, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್, ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ಹಿರಿಯ ವಕೀಲರು ಮತ್ತು ಯುಐಎ ಇಂಡಿಯಾ ಅಧ್ಯಾಯದ ಅಧ್ಯಕ್ಷರಾದ ಎ.ಕೆ. ಗಂಗೂಲಿ ಅವರು ಉಪಸ್ಥಿತರಿದ್ದರು.
