ಬೆಂಗಳೂರು, ಮಾರ್ಚ್ 14, (ಕರ್ನಾಟಕ ವಾರ್ತೆ) :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಯುಗಾದಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರಯಾಣಿಕರ ಸಂಚಾರದ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ರಾಜ್ಯದಾದ್ಯಂತ ಒಟ್ಟು 2000 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ.
2026 ನೇ ಮಾರ್ಚ್ 19 ರಿಂದ 21 ರ ರವರೆಗೆ ಬೆಂಗಳೂರಿನಿAದ ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್‌ಗಳು ಲಭ್ಯವಿರುತ್ತವೆ. ಹಬ್ಬ ಮುಗಿದ ನಂತರ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಮರಳಲು ದಿನಾಂಕ 22.03.2026 ರಂದು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಾಚರಣೆಯ ವಿವರಗಳು:
ಬೆಂಗಳೂರಿನಿAದ ಹೊರಡುವ ಸ್ಥಳಗಳು:
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಇಲ್ಲಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಹಾಗೂ ಬೀದರ್ ಕಡೆಗೆ ಬಸ್‌ಗಳು ಸಂಚರಿಸಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಚಾಮರಾಜನಗರ ಕಡೆಗೆ ಸಂಚರಿಸುವ ಬಸ್‌ಗಳು ಇಲ್ಲಿಂದ ಲಭ್ಯವಿರುತ್ತವೆ.
ಮುಂಗಡ ಕಾಯ್ದಿರಿಸುವಿಕೆ ಮತ್ತು ರಿಯಾಯಿತಿ:
ಪ್ರಯಾಣಿಕರು ತಮ್ಮ ಆಸನಗಳನ್ನು www.ksrtc.karnataka.gov.in ವೆಬ್‌ಸೈಟ್ ಮೂಲಕ ಅಥವಾ ಅಧಿಕೃತ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಮುಂಗಡವಾಗಿ ಕಾಯ್ದಿರಿಸಬಹುದು.
ಒಂದೇ ಟಿಕೆಟ್‌ನಲ್ಲಿ 4 ಅಥವಾ ಹೆಚ್ಚಿನ ಪ್ರಯಾಣಿಕರು ಒಟ್ಟಾಗಿ ಕಾಯ್ದಿರಿಸಿದಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುವುದು.
ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ (Return Journey),ವಾಪಸ್ ಪ್ರಯಾಣದ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ದೊರೆಯಲಿದೆ.
ಇತರೆ ಸೌಲಭ್ಯಗಳು:
ಪರಸ್ಥಳದ ಪ್ರಯಾಣಿಕರಿಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು (ಚೆನ್ನೈ, ಕೋಯಂಬತ್ತೂರು), ಆಂಧ್ರಪ್ರದೇಶ/ತೆಲAಗಾಣ (ಹೈದರಾಬಾದ್, ವಿಜಯವಾಡ) ಮತ್ತು ಕೇರಳದ ಪ್ರಮುಖ ನಗರಗಳಿಗೂ ವಿಶೇಷ ಕಾರ್ಯಾಚರಣೆ ಇರಲಿದೆ.
ಮಹಿಳಾ ಪ್ರಯಾಣಿಕರಿಗೆ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯವು ಈ ವಿಶೇಷ ಬಸ್‌ಗಳಲ್ಲಿಯೂ (ಅನ್ವಯವಾಗುವ ವರ್ಗಗಳಲ್ಲಿ) ಇರಲಿದೆ.
ಸಾರ್ವಜನಿಕರು ಕೊನೆಯ ಕ್ಷಣದ ದಟ್ಟಣೆಯನ್ನು ತಪ್ಪಿಸಲು ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿ, ಸುರಕ್ಷಿತವಾಗಿ ಹಬ್ಬವನ್ನು ಆಚರಿಸಲು ಕೆಎಸ್ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
