ಬೆಂಗಳೂರು, ಡಿಸೆಂಬರ್ 31 (ಕರ್ನಾಟಕ ವಾರ್ತೆ):
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಲ್ಲಿ ಪ್ರಥಮ ಹಂತವಾಗಿ ಚಾಲಕ-ಕಂ-ನಿರ್ವಾಹಕ (ಪಜಾ-ಹಿಂಬಾಕಿ) ಹಾಗೂ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ (ಎರಡೂ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ವೃತ್ತಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಮನಾಬಾದ್ ಪ್ರಾದೇಶಿಕ ತರಬೇತಿ ಕೇಂದ್ರ ಬೀದರ್-ಜಿಲ್ಲೆಯ ಚಾಲನಾ ಪಥದಲ್ಲಿ ದಿನಾಂಕ: 14-12-2024 ರಿಂದ ಪ್ರಾರಂಭಿಸಲಾಗಿದ್ದು, ಸಂಸ್ಥೆಯ ವೆಬ್ ಸೈಟ್ ವಿಳಾಸ www.nwkrtc.karnataka.gov.in ನಲ್ಲಿ ತಮ್ಮ ಅರ್ಜಿ ಸಂಖ್ಯೆ/ಜನ್ಮ ದಿನಾಂಕವನ್ನು ನಮೂದಿಸಿ ಕರೆ ಪತ್ರವನ್ನು ಮುದ್ರಿಸಿಕೊಂಡು ನಿಗದಿತ ಸ್ಥಳ/ದಿನಾಂಕ/ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ತಿಳಿಸಲಾಗಿತ್ತು.
ಸದರಿ ನೇಮಕಾತಿ ಪ್ರಕ್ರಿಯೆಯು ದಿನಾಂಕ: 07-01-2025 ರವರೆಗೆ ಮಾತ್ರ ನಡೆಯಲಿದ್ದು, ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ಅಂತಿಮ ಅವಕಾಶ ನೀಡಿ 2025ನೇ ಜನವರಿ 08 ರಿಂದ 13 ರ ವರೆಗೆ (ಭಾನುವಾರ ಹೊರತುಪಡಿಸಿ) ಹಾಜರಾಗುವಂತೆ ತಿಳಿಸಲಾಗಿದೆ. 2025ನೇ ಜನವರಿ 13 ರ ನಂತರ ಚಾಲನಾ ವೃತ್ತಿ ಪರೀಕ್ಷೆಗೆ ಪುನ: ಯಾವುದೇ ಕಾರಣಕ್ಕೂ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮುಂದುವರೆದು, 2024ನೇ ಡಿಸೆಂಬರ್ 27 ರಂದು ಸನ್ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸೀಂಗ್, ರವರ ನಿಧನದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಘೋಷಣೆ ಆಗಿದ್ದರಿಂದ 2024ನೇ ಡಿಸೆಂಬರ್ 27 ರಂದು ನಿಗದಿಯಾಗಿದ್ದ ಚಾಲನಾ ವೃತ್ತಿ ಪರೀಕ್ಷೆಯನ್ನು ಮುಂದೂಡಲಾಗಿರುತ್ತದೆ. ಸದರಿ ಅಭ್ಯರ್ಥಿಗಳಿಗೆ 2025ನೇ ಜನವರಿ 07 ರಂದು ಚಾಲನಾ ವೃತ್ತಿ ಪರೀಕ್ಷೆಯನ್ನು ಮರು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೇ ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.