Site icon MOODANA Web Edition

ಎಲ್ಲಾ ನೋಂದಾಯಿತ ಸಂಸ್ಥೆಗಳು ಆನ್‍ಲೈನ್‍ನಲ್ಲಿ ಕಡ್ಡಾಯವಾಗಿ ವಂತಿಕೆ ಪಾವತಿಸಲು ಕಾರ್ಮಿಕ ಇಲಾಖೆ ಸೂಚನೆ

ಬೆಂಗಳೂರು, ಡಿಸೆಂಬರ್ 31 (ಕರ್ನಾಟಕ ವಾರ್ತೆ):  

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ 1965ರ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ ಕಾಯ್ದೆ-1948 2(ಡಿ)ರಡಿ ನೋಂದಣಿಯಾಗಿರುವ ಎಲ್ಲಾ ನೋಂದಾಯಿತ ಕಾರ್ಖಾನೆಗಳು, ಪ್ಲಾಂಟೇಶನ್‍ಗಳು. ಕಾರ್ಯಗಾರಗಳು, ಮೋಟಾರು ದೊಡ್ಡ ಬಾಡಿಗೆ ಬಸ್ ಸೇವೆ, ವಿದ್ಯುತ್ತನ್ನು ಉಪಯೋಗಿಸಿ 10 ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುವ ಹಾಗೂ ವಿದ್ಯುತ್ ಉಪಯೋಗಿಸದೇ 20 ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು ಮತ್ತು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ 1961 ಹಾಗೂ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ರ ಅಡಿಯಲ್ಲಿ 50 ಕ್ಕಿಂತ ಹೆಚ್ಚಿನ ಎಲ್ಲಾ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ/ಐಟಿಬಿಟಿ ಸಂಸ್ಥೆಗಳು, ಚಾರಿಟೇಬಲ್/ಶಿಕ್ಷಣಸಂಸ್ಥೆಗಳು ಹಾಗೂ ಎರಡು ಕಾಯ್ದೆಗಳಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಆನ್‍ಲೈನ್ ಮೂಲಕ ವಂತಿಕೆ ಪಾವತಿಸಬೇಕಾಗಿರುತ್ತದೆ.

ಪ್ರತಿ ಕಾರ್ಮಿಕನಿಗೆ ರೂ.20/- ಕಾರ್ಖಾನೆಗಳ ಮಾಲೀಕರು/ ಕಾರ್ಯಸಂಸ್ಥೆಗಳಿಂದ ರೂ.40/-ರಂತೆ ಒಟ್ಟು ರೂ. 60/-ಗಳನ್ನು ಕಾರ್ಖಾನೆ/ಕಾರ್ಯಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಒಟ್ಟು ಸಿಬ್ಬಂದಿ ಮತ್ತು ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ.

ಈ ಕಾಯ್ದೆಯಡಿಯಲ್ಲಿ ಆನ್‍ಲೈನ್ ವೆಬ್‍ಸೈಟ್ www.klwb.karnataka.gov.in  ಮುಖಾಂತರ ವಂತಿಗೆ ಪಾವತಿಸಬಹುದು. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ವಂತಿಗೆ ಪಾವತಿಸಲು 2025 ಜನವರಿ 15 ಕೊನೆಯ ದಿನಾಂಕವಾಗಿದೆ.

ನಿಯಮ ಪಾಲಿಸದ ಸಂಸ್ಥೆಗಳಿಗೆ ಮೊದಲ 3 ತಿಂಗಳಿಗೆ ವಾರ್ಷಿಕವಾಗಿ ಶೇಕಡ 12% ರಂತೆ ಹಾಗೂ ನಂತರದ ತಿಂಗಳಿಗೆ ವಾರ್ಷಿಕವಾಗಿ ಶೇಕಡ 18% ರಂತೆ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು, ಹಾಗೂ ಕಲ್ಯಾಣ ಆಯುಕ್ತರಿಂದ ತಪಾಸಣೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ತನಿಖೆಗೆ ಒಳಪಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8277291175, 8277120505, 9141602562. 9141585402, 9483710329 ಮೂಲಕ ಸಂಪರ್ಕಿಸಬಹುದು ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಕಲ್ಯಾಣ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version