ಹುಬ್ಬಳಿ (ಕರ್ನಾಟಕ ವಾರ್ತೆ )ಫೆ.04:* ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವಿಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಇಂದು ಬೆಳಿಗ್ಗೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಬೈಸಿಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಕಿತ್ತೂರು ಚನ್ನಮ್ಮ ಸರ್ಕಲ್‍ದಲ್ಲಿ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ಮಾತನಾಡಿ, ಮತದಾನ ಪ್ರತಿ ಅರ್ಹ ನಾಗರೀಕನ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಉತ್ತಮ ಜನಪ್ರತಿನಿಧಿ ಮತ್ತು ಉತ್ತಮ ಸರ್ಕಾರದ ಆಯ್ಕೆಗಾಗಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕೆಂದು ಹೇಳಿದರು.
ಬೈಸಿಕಲ್ ಜಾಥಾದಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸದಸ್ಯರು, ಸ್ಕೆಟಿಂಗ್ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಬೈಸಿಕಲ್ ಜಾಥಾವು ನಗರದ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಸಂಚರಿಸಿ, ಮತದಾನ ಜಾಗೃತಿ ಮೂಡಿಸಿತು.