Site icon MOODANA Web Edition

ಫೆಬ್ರವರಿ ಮೊದಲ ವಾರದಲ್ಲಿ ಭೂ ಸುರಕ್ಷಾ ಯೋಜನೆ ಆರಂಭಸರ್ವೇ ಇಲಾಖೆಯ ಸುಮಾರು 2 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ-ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.31: ಸರ್ವೇ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸರ್ವೇ ಕಾರ್ಯಗಳು ವಿಳಂಬವಾಗುತ್ತಿವೆ. ಈಗಾಗಲೇ 750 ಪರವಾನಿಗಿ ಸರ್ವೇದಾರರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ ತರಬೇತಿಯನ್ನೂ ಸಹ ನೀಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಎಲ್ಲಾ ತಾಲೂಕುಗಳಿಗೆ ಆ ತಾಲೂಕುಗಳಲ್ಲಿರುವ ಸರ್ವೇ ಬಾಕಿ ಆಧಾರದ ಮೇಲೆ ಸರ್ವೇದಾರರನ್ನು ಹಂಚಿಕೆ ಮಾಡಲಾಗುತ್ತದೆ. ಎಲ್ಲಾ ಕೆಲಸಗಳು ಪರವಾನಿಗಿ ಸರ್ವೇದಾರರಿಂದ ಆಗುವುದಿಲ್ಲ. ಹೀಗಾಗಿ ಸರ್ಕಾರಿ ಸರ್ವೇದಾರರು ಬಹಳ ಮುಖ್ಯವಾಗಿರುವುದರಿಂದ ಮುಖ್ಯಮಂತ್ರಿಗಳು 357 ಜನ ಸಹಾಯಕ ಭೂ ದಾಖಲೆ ಅಧಿಕಾರಿಗಳು ಹಾಗೂ ಸರ್ವೇದಾರರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆಯನ್ನು ನೀಡಿರುತ್ತಾರೆ. ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ)ದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಫೆಬ್ರವರಿ ತಿಂಗಳಲ್ಲಿ 357 ಜನರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಕರೆಯಲಾಗುವುದು. ಎರಡನೇ ಹಂತದಲ್ಲಿ ಸರ್ವೇ ಇಲಾಖೆಯಲ್ಲಿ ಖಾಲಿಯಿರುವ 592 ಹುದ್ಧೆಗಳ ಭರ್ತಿಗೂ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಬಾಕಿಯಿರುವ ಎಲ್ಲಾ ಹುದ್ಧೆಗಳನ್ನು ಭರ್ತಿ ಮಾಡಬೇಕೆಂದು ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಸುಮಾರು 2 ಸಾವಿರ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಹೇಳಿದರು.

ಇಂದು ತಾಲೂಕು ಆಡಳಿತಸೌಧದ ವಿವಿಧ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ದಾಖಲೆಗಳ ಇಲಾಖೆಯಲ್ಲಿ ಸಹ ಜನರಿಗೆ ವ್ಯಾಪಕ ಸಮಸ್ಯೆಗಳಿವೆ. ಕೆಲವು ಭೂ ದಾಖಲೆಗಳ ಕಚೇರಿಯಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆದರೂ ಕೂಡ ರಾಜ್ಯದಲ್ಲಿ ಭೂ ದಾಖಲೆಗಳ ಇಲಾಖೆಯಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಭೂ ದಾಖಲೆಗಳ ಕೆಲಸಗಳು ಬಾಕಿಯಿವೆ. ಭೂ ದಾಖಲೆಗಳ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಆಧುನಿಕ ಉಪಕರಣೆಗಳನ್ನು ನೀಡುವುದರ ಮೂಲಕ ಸರ್ವೇ ಕಾರ್ಯಗಳು ಶೀಘ್ರವಾಗಿ ನಡೆಯಬೇಕು. ಸುಮಾರು ರೂ. 20 ಕೋಟಿ ವೆಚ್ಚದಲ್ಲಿ ಎಲ್ಲಾ ತಾಲೂಕುಗಳಿಗೂ ಹೊಸ ತಂತ್ರಜ್ಞಾನಾಧಾರಿತ ಉಪಕರಣಗಳನ್ನು ವಿತರಿಸಲು ಈ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಹೊಸ ತಂತ್ರಜ್ಞಾನಾಧಾರಿತ ಉಪಕರಣಗಳು ಹಾಗೂ ಸಿಬ್ಬಂದಿಗಳ ನೇಮಕಾತಿಯಿಂದ ಸರ್ವೇ ಕೆಲಸಗಳು ವೇಗವಾಗಿ ನಡೆಯಲಿವೆ. ಅಲ್ಲದೇ ಯಾವ ಕೆಲಸಗಳು ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ಕೆಲವು ಕಡೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯಗಳು ನಡೆಯುತ್ತಿವೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಲು ಕ್ರಮವಹಿಸಲಾಗುವುದು ಎಂದರು.

ಹುಬ್ಬಳ್ಳಿ ತಹಶೀಲ್ದಾರ ಕಚೇರಿಗೆ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದೇನೆ. ಕಳೆದ ಬಾರಿ ಭೇಟಿ ನೀಡಿದಾಗ ಆನ್‍ಲೈನ್ ಮೂಲಕ ಕಡತಗಳ ವಿಲೇವಾರಿ ಮಾಡಲು ತೀರ್ಮಾನಿಸಲಾಗಿತ್ತು. ಅದು ಅನುಷ್ಠಾನವಾಗಿರಲಿಲ್ಲ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಹಾಕುವುದರಿಂದ ಅರ್ಜಿಗಳು ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಕಡತಗಳು ಕಳೆದು ಹೋಗುವುದು ತಪ್ಪುತ್ತದೆ. ಅಲ್ಲದೇ ತಹಶೀಲ್ದಾರರು ಅರ್ಜಿಗಳು ಯಾರ ಬಳಿ, ಏಷ್ಟು ದಿನಗಳಿಂದ ಇವೆ ಎನ್ನುವುದನ್ನು ಸಹ ಪರಿಶೀಲಿಸಬಹುದಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದಿಲ್ಲ. ಜನರು ಕಡತಗಳು ಶೀಘ್ರವಾಗಿ ವಿಲೇವಾರಿ ಆಗುತ್ತಿಲ್ಲ ಎನ್ನುವ ದೂರುಗಳು ಸಹ ಬರುವುದಿಲ್ಲ. ಈಗ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದರಿಂದ ತ್ವರಿತಗತಿಯಲ್ಲಿ ಕಡತಗಳು ವಿಲೇವಾರಿಯಾಗುತ್ತವೆ. ಇ- ಆಫೀಸ್‍ನಿಂದಾಗಿ ಕಾಲಕಾಲಕ್ಕೆ ಕಡತಗಳು ವಿಲೇವಾರಿಯಾಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಅರ್ಜಿಗಳು ವಿಳಂಬವಾಗುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಮರಾಠರ ಕಾಲದ ಭೂ ದಾಖಲೆಗಳು ಇಲ್ಲಿವೆ. 200 ವರ್ಷಗಳ ಹಳೆಯ ಶಿಥಿಲಾವಸ್ಥೆ ದಾಖಲೆಗಳು ಸಹ ರೆಕಾರ್ಡ್ ರೂಮಿನಲ್ಲಿವೆ. ಅವುಗಳನ್ನು ಗಣಕೀರಣ ಮಾಡಲಾಗುವುದು ಎಂದು ತಿಳಿಸಿದರು.

ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಅರ್ಜಿಗಳು ಮೊದಲು 2 ಗಂಟೆಯಲ್ಲಿ ನೋಂದಣಿ ಆಗುತ್ತಿದ್ದವು. ಈಗ ಕೇವಲ 15 ನಿಮಿಷಗಳಲ್ಲಿ ಅರ್ಜಿಗಳು ನೋಂದಣಿಯಾಗಲಿವೆ. ಕೆಲವು ತಾಲೂಕುಗಳಲ್ಲಿ ಜನರು ದಾಖಲೆಗಳನ್ನು ತಿದ್ದುವುದು, ಕಳ್ಳತನ ಮಾಡುವುದು, ಕಳೆದಿರುವುದು ಕಂಡು ಬಂದಿವೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕು ಕಚೇರಿಗೆ ಅವಶ್ಯಕವಾಗಿ ಬೇಕಾಗಿರುವ ಸ್ಕ್ಯಾನರ್, ಕಂಪ್ಯೂಟರ್‍ಗಳನ್ನು ವಿತರಿಸಲಾಗಿದೆ. ಒಂದು ವಾರದಲ್ಲಿ ರೆಕಾರ್ಡ್ ರೂಮಿನಲ್ಲಿರುವ ಎಲ್ಲಾ ದಾಖಲೆಗಳನ್ನು ಗಣಕೀಕರಣ ಮಾಡಲಾಗುವುದು. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿರುವ ಏಜೆಂಟರ್ ಹಾವಳಿಯನ್ನು ತಡೆಯಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಭೂ ಸುರಕ್ಷಾ ಯೋಜನೆ ಶೀಘ್ರದಲ್ಲಿ ಆರಂಭ
ಭೂ ಸುರಕ್ಷಾ ಎಂಬ ಯೋಜನೆಯನ್ನು ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಆರಂಭ ಮಾಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿನ ಒಂದೊಂದು ತಾಲೂಕು(31)ಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಅವಶ್ಯಕ ಸಿಬ್ಬಂದಿ, ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ. ಅಲ್ಲದೇ ಸಿಬ್ಬಂದಿಗಳ ವೇತನವನ್ನು ಸರ್ಕಾರ ಭರಿಸಲಿದೆ. ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ರೆಕಾರ್ಡ್ ರೂಮಿನಲ್ಲಿರುವ ಎಲ್ಲಾ ದಾಖಲೆಗಳನ್ನು ಗಣಕೀರಣ ಮಾಡಬೇಕು. ಆ ದಾಖಲೆಗಳನ್ನು ಜನರು ಪಡೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿಗಳ ದಾಖಲೆಗಳನ್ನು ಗಣಕೀರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ ಸೇರಿದಂತೆ ಇತರರು ಹಾಜರಿದ್ದರು.

Exit mobile version