Site icon MOODANA Web Edition

ಶಿರಡಿ ಸಾಯಿಬಾಬಾ ದರ್ಶನ ಪಡೆದ ಕುರಿತು ಪ್ರವಾಸ ಕಥನಮನೆ ಹಾಗೂ ಬ್ಯಾಂಕಿಗೆ ಬಾಗಿಲುಗಳೇ ಇಲ್ಲದ ಊರು ಶನಿ ಸಿಂಗನಾಪುರ ನೋಡಿ ನಿಬ್ಬೆರಗಾಗಿದ್ದು..!

ಕಳೆದ ವಾರ ನಮ್ಮ ಮೇಡಂ ಅವರು ಮೂರು ದಿನಗಳ ಕಾಲ ರಜೆಯಿದೆ. ಏಲ್ಲಿಗಾಗದರೂ ಪ್ರವಾಸಕ್ಕೆ ಹೋಗಿ ಬರೋಣ ಎಂದು ಆಫೀಸಿನಲ್ಲಿ ಚರ್ಚೆ ನಡೆಸುತ್ತಿದ್ದರು. ಆ ದಿನ ನಾನು ಸ್ವಲ್ಪ ಹೊರಗಡೆ ಕೆಲಸ ಮುಗಿಸಿಕೊಂಡು ಬರುವುದರಲ್ಲಿ ಬೇರೆ ಬೇರೆ ಸ್ಥಳಗಳ ಚರ್ಚೆಗಳು ನಡೆಯುತ್ತಿದ್ದವು. ನಾನು ಶಿರಡಿಗೆ ಪಲ್ಲಕ್ಕಿ ಬಸ್ ಬಿಟ್ಟಿರುವ ಕುರಿತು ಮೇಡಂ ಅವರಿಗೆ ತಿಳಿಸಿದೆ. ಅವರು ನಮ್ಮ ಮಗಳಿಗೆ ಫೋನ್ ಮಾಡಿ ವಿಚಾರಿಸುತ್ತೀನಿ ಇರು ಎಂದರು. ಫೋನ್ ಮಾತಾಡಿದ ಮೇಲೆ ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿಸಿ, ಬಳಿಕ ಬಸ್‍ಗೆ ಹೋಗಬೇಕು ಎಂದು ನಿರ್ಧಾರ ಮಾಡಿದರು. ಹಾಗಾದ್ರೆ ಯಾರು ಯಾರೂ ಹೋಗುವುದು ಎಂದು ಕೇಳಿದರು. ಆಗ ಒಬ್ಬೊಬ್ಬರು ಪರಸ್ಪರ ಮುಖ ನೋಡಿಕೊಂಡರು. ನಾನು ಕೊಪ್ಪಳ ಜಾತ್ರೆಗೆ ಹೋಗುತ್ತೇನೆ ಎಂದು ಶಿವು ಹೇಳಿದ. ನಗರಿ ಮೇಡಂ ಅವರು ನಾನು ತಿರುಪತಿಗೆ ಹೋಗಬೇಕೆಂದ್ದೇನೆ ಎಂದರು. ಮತ್ತೆ ಮಟ್ಟಿ ಮೇಡಂ ಹಾಗೂ ನಾನು ಮತ್ತು ಅಪ್ರೆಂಟಿಸ್ ಹುಡುಗರು ಉಳಿದೆವು. ಅಪ್ರೆಂಟಿಸ್ ಹುಡುಗರು ನಾವು ಬರುವುದಿಲ್ಲ ಎಂದು ತಿಳಿಸಿದರು. ನಾನು ಮತ್ತು ಮೇಡಂ ಅವರು ಬೇರೆ ದಾರಿಯಿಲ್ಲದೇ ಹೋಗಲೇ ಬೇಕಾಯಿತು. ಕೊನೆಗೆ ನಾಲ್ಕು ಜನರು ಹೋಗುವುದು ನಿರ್ಧಾರವಾಯಿತು.

ಶಿರಡಿಗೆ ಮುಂಗಡ ಟಿಕೆಟ್ ಬುಕ್ ಮಾಡಿಸಲು ಹೊಸ ಬಸ್ ನಿಲ್ದಾಣಕ್ಕೆ ತೆರಳಿದೆ. ಅಲ್ಲಿ ನಿಯಂತ್ರಣಾಧಿಕಾರಿಗಳ ಜೊತೆ ಟಿಕೆಟ್ ಕುರಿತಾಗಿ ಮಾತಾಡಿದೆ. ಈಗಾಗಲೇ ಎರಡು ಬಸ್‍ಗಳಲ್ಲಿ ಸೀಟ್ ಖಾಲಿ ಇಲ್ಲ ಎಂದರು. ಹೇಗಾದ್ರೂ ಮಾಡಿ ಸೀಟ್ ಕೊಡಿಸಿ ಸರ್ ಎಂದು ಗೋಗರಿದೆ. ಅವರು ನಾಗು ಇರು ಸ್ವಲ್ಪ ಎಂದು ಹೇಳಿ, ಫೋನ್ ಮಾಡಿದರು. ಅವರಿವರ ಜೊತೆ ಮಾತಾಡಿ ಆದ ಮೇಲೆ ನಮಗೆ ಪಲ್ಲಕ್ಕಿ ಬಸ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್‍ಗಳಲ್ಲಿ ಎರಡೆರಡು ಸೀಟು ಕೊಡಿಸಿದರು. ಅಲ್ಲಿಗೆ ಮನದಲ್ಲಿದ್ದ ಆತಂಕವೆಲ್ಲ ದೂರವಾಗಿ ನಿಟ್ಟುಸಿರು ಬಿಟ್ಟೆ! ಗುರುವಾರ ಸಂಜೆ ನಾನು ಊರಿನಿಂದ ರೆಡಿಯಾಗಿ ಹುಬ್ಬಳ್ಳಿಗೆ ಬಂದೆ. ಮೇಡಂ ಅವರ ತಂಡ ನನಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದರು. ನಾನು ಬಸ್ ನಿಲ್ದಾಣ ತಲುಪಿದ ಇಪ್ಪತ್ತು ನಿಮಿಷಗಳ ತರುವಾಯ ಶಿರಡಿ ಹೋಗುವ ಬಸ್ ಬಂದಿತು. ಅದರಲ್ಲಿ ಇಬ್ಬರೂ ಹತ್ತುವ ಕುರಿತು ಕಂಡಕ್ಟರ್ ಬಳಿ ವಿಚಾರಿಸಿದೆ. ಮೊದಲು ನಾವು ಹೋಗುತ್ತೇವೆ, ನೀವು ಇನ್ನೊಂದು ಬಸ್‍ಗೆ ಬನ್ನಿ ಎಂದರು. ನಾನು ಮತ್ತು ಮೇಡಂ ಪಲ್ಲಕ್ಕಿ ಬಸ್ ಹೋಗಲು ಅಣಿಯಾದೆವು. ಹುಬ್ಬಳ್ಳಿಯಿಂದ ಶಿರಡಿಗೆ ಬಸ್ ಹೊರಟಿತ್ತು. ಬೆಳಗಾವಿ ಹತ್ತಿರ ಊಟ ಮುಗಿಸಿಕೊಂಡು ನಿದ್ದೆಗೆ ಜಾರಿದೆ.

ಮರುದಿನ ನಸುಕಿನ ಜಾವ ಎಚ್ಚರಾದಾಗ ಅಹ್ಮದ್ ನಗರ ಹತ್ತಿರವಿದ್ದೆವು. 8 ಗಂಟೆಗೆ ಅಹ್ಮದ್ ನಗರ ದಾಟಿ ಸ್ಟ್ರಾಬೆರಿ ಹೋಟೆಲ್ ಬಳಿ ಬಸ್ ನಿಂತಿತು. ಮುಖ ತೊಳೆದುಕೊಂಡು ಬಸ್ ಹತ್ತಿದೆವು. ಅಲ್ಲಿಂದ ಮುಂದೆ ಶಿರಡಿ ತಲುಪಿದೆವು. ಶಿರಡಿಯಲ್ಲಿ ಮೊದಲೇ ಹೋಟೆಲ್ ರೂಮ್ ಬುಕ್ ಮಾಡಲಾಗಿತ್ತು. ಆದರೆ ಅಲ್ಲಿ ಕೆಲವು ಕೆಲಸಗಳು ನಡೆಯುತ್ತಿದ್ದರಿಂದ ಕಿಂಗ್‍ಡಮ್ ಆಫ್ ಸಾಯಿ ಹೋಟೆಲ್‍ಗೆ ಹೋದೆವು. ಅಲ್ಲಿ ಸುಸಜ್ಜಿತವಾದ ರೂಮ್ ವಾತಾವರಣ ಮನಸ್ಸಿಗೆ ಹಿಡಿಸಿತು. ಸ್ನಾನ ಮಾಡಿಕೊಂಡು ತಿಂಡಿ ತಿಂದು, ಸಾಯಿಬಾಬಾ ದರ್ಶನಕ್ಕೆ ಹೊರಟೆವು. ಸಾಮಾನ್ಯ ಸರತಿ ಸಾಲಿನಲ್ಲಿ ನಿಂತುಕೊಂಡು, ಮೂರು ಗಂಟೆಗಳ ತರುವಾಯ ದರ್ಶನ ಭಾಗ್ಯ ದೊರೆಯಿತು. ದೂರದಿಂದ ಸಾಯಿಬಾಬಾನ ದರ್ಶನ ಪಡೆಯುತ್ತಿದ್ದ ನಮಗೆ ಹತ್ತಿರವೇ ಹೋಗಿ ದರ್ಶನ ಪಡೆದುಕೊಂಡೆವು. ದರ್ಶನ ಮುಗಿಸಿಕೊಂಡು ಬಳಿಕ ಪ್ರಸಾದನಿಲಯದ ಕಡೆಗೆ ನಡೆದೆವು. ಸಾವಿರಾರು ಭಕ್ತರನ್ನು ಪ್ರಸಾದ ಸ್ವೀಕರಿಸಲು ನಿಂತಿರುವುದನ್ನು ನೋಡಿ ಆಶ್ಚರ್ಯವಾಯಿತು. ಪ್ರಸಾದ ಸ್ವೀಕರಿಸಿದ ಬಳಿಕ ರೂಮ್ ಕಡೆಗೆ ಹೆಜ್ಜೆ ಹಾಕಿದೆವು. ಸಂಜೆ ಸ್ವಲ್ಪ ಶಾಪಿಂಗ್ ಮಾಡಿಕೊಂಡು ಬಂದೆವು. ಊಟದ ಬಳಿಕ ಆಯಾಸವಾಗಿದ್ದ ದೇಹಕ್ಕೆ ಹಾಸಿಗೆ ಒರಗಿದ ತಕ್ಷಣ ನಿದ್ರಾ ದೇವತೆ ಆವರಿಸಿದಳು.

ಶನಿವಾರದಂದು ಶನಿ ಸಿಂಗನಾಪುರಕ್ಕೆ ಹೋಗಬೇಕು ನಿರ್ಧಾರ ಮಾಡಿ ಆಗಿತ್ತು. ಶನಿ ಸಿಂಗನಾಪುರ ಎಂದು ಟ್ಯಾಕ್ಸಿ ಡ್ರೈವರ್‍ಗಳು ಜನರನ್ನು ಕರೆಯುತ್ತಿದ್ದರು. ಶಿರಡಿಯಿಂದ ಟ್ಯಾಕ್ಸಿ ಮಾಡಿಕೊಂಡು ಶನಿ ಸಿಂಗನಾಪುರಕ್ಕೆ ಹೊರಟೆವು. ದಾರಿ ಮಧ್ಯದಲ್ಲಿ ಕಬ್ಬಿನ ಹಾಲು ಕುಡಿಯುವ ಅಂಗಡಿಗಳು ಕಾಣ ಸಿಕ್ಕವು. ಒಂದುವರೆ ತಾಸಿನ ಬಳಿಕ ಶನಿ ಸಿಂಗನಾಪುರಕ್ಕೆ ಸ್ವಾಗತ ಎಂಬ ದೊಡ್ಡದಾದ ಫಲಕ ಕಣ್ಣಿಗೆ ಕಾಣಿಸಿತು. ಮುಂದೆ ದಾರಿಯಿಲ್ಲದೇ ಯಾವುದೇ ಮನೆಗಳಿಗೆ, ಬ್ಯಾಂಕಿಗೆ ಬಾಗಿಲುಗಳು ಇಲ್ಲದಿರುವುದನ್ನು ಹಾಗೂ ಯಾವುದೇ ಮನೆಯಲ್ಲಿ ಕಳ್ಳತನವಾಗದಿರುವುದನ್ನು ಕಳ್ಳತನ ಮಾಡಿದವರೂ ಸತ್ತಿರುವ ಕುರಿತು ಡ್ರೈವರ್ ತಿಳಿಸಿದ. ಅಲ್ಲದೇ ಶನಿ ದೇವರ ದರ್ಶನದ ಬಳಿಕ ಯಾರೂ ಕೂಡ ಹಿಂತಿರುಗಿ ನೋಡಬೇಡಿ, ಯಾಕೆಂದರೆ ನಿಮ್ಮ ಶನಿಯನ್ನು ಇಲ್ಲಿಯೇ ಬಿಟ್ಟು ಹೋಗಬೇಕು. ಅದರ ಹೊರತು ಮರಳಿ ತೆಗೆದುಕೊಂಡು ಹೋಗಬಾರದು ಎಂದು ಡ್ರೈವರ್ ತಿಳಿಸಿದ. ಶನಿ ದೇವರ ದರ್ಶನ ಮುಗಿಸಿಕೊಂಡು ಶಿರಡಿಗೆ ಮರಳಿದಾಗ ಮಧ್ಯಾಹ್ನ 3 ಗಂಟೆಯಾಗಿತ್ತು. ಸಂಜೆ ಶಿರಡಿ ಸಾಯಿಬಾಬಾಗೆ ಕೈ ಮುಗಿದು ಹುಬ್ಬಳ್ಳಿ ಬಸ್ ಹತ್ತಿದೆವು.

ನಾಗಪ್ಪ ಕೆ ಮಾದರ
ರಾಜ್ಯ ಸಮಾಚಾರ ಕೇಂದ್ರ ಹುಬ್ಬಳ್ಳಿ.

Exit mobile version