Site icon MOODANA Web Edition

ಲಿಂಗರಾಜ ನಗರದಲ್ಲಿ ಶ್ರೀ ರಾಮೋತ್ಸವ 

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಸ್ಥಾಪನಾ ಕಾರ್ಯಕ್ರಮ ನಿಮಿತ್ಯ ಲಿಂಗರಾಜ ನಗರ ನಾಗರಿಕರು ಹಾಗೂ ಶ್ರೀ ಕಟ್ಟಿ ಮಂಗಳಾದೇವಿ ದೇವಸ್ಥಾನ ಮತ್ತು ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ ವತಿಯಿಂದ ಪೂಜೆ, ಮೆರವಣಿಗೆ, ನೇರಪ್ರಸಾರದ ವೀಕ್ಷಣೆ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ವೀರಾಂಜನೇಯ ದೇವಸ್ಥಾನದಲ್ಲಿ ಆಂಜನೇಯನಿಗೆ ಪೂಜೆ ಸಲ್ಲಿಸಿದ ನಂತರ ರಾಮನ ಭಾವಚಿತ್ರದ ಮೆರವಣಿಗೆ ಆರಂಭವಾಯಿತು. ಅಪೊಲೊ ಮೆಡಿಕಲ್ಸ್ ಎದುರಿನ ಉದ್ಯಾನದಲ್ಲಿ ನೆಡಲಾಗಿರುವ ಪಂಚವಟಿ ಸಸಿಗಳಿಗೆ ಪೂಜೆ ಸಲ್ಲಿಸಿದ ನಂತರ, ಶ್ರೀ ಕಟ್ಟಿ ಮಂಗಳಾದೇವಿ ದೇವಸ್ಥಾನದಲ್ಲೂ ಪೂಜೆ ನಡೆಯಿತು. ಮಂಗಳವಾದ್ಯದೊಂದಿಗೆ ಅತ್ತಿಗೇರಿ ಲೇಔಟ್‌ನಲ್ಲಿರುವ ರಾಮ ಮಂದಿರದಲ್ಲಿಯೂ ಪೂಜೆ ಸಲ್ಲಿಕೆಯಾದ ಬಳಿಕ ಲಿಂಗರಾಜ ನಗರ ಉತ್ತರ ಸಮುದಾಯ ಭವನಕ್ಕೆ ಆಗಮಿಸಿದ ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು, ಅಯೋಧ್ಯಾದಲ್ಲಿನ ಕಾರ್ಯಕ್ರಮವನ್ನು ಎಲ್.ಇ.ಡಿ. ಪರದೆಯ ಮೇಲೆ ವೀಕ್ಷಿಸಿದರು. ನಂತರ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಪೋರೇಟರ್ ಉಮೇಶಗೌಡ ಕೌಜಗೇರಿ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಜಿ.ವಿ. ವಳಸಂಗ, ಶಂಕ್ರಣ್ಣ ನೇಗಿನಾಳ, ರಾಜಣ್ಣ ಬತ್ಲಿ, ಎಂ.ಕೆ. ಪಾಟೀಲ, ವೀರು ಉಪ್ಪಿನ, ಶಿವಾನಂದ ಕೊಟ್ರಶೆಟ್ಡಿ, ಮಹೇಶ ದ್ಯಾವಪ್ಪನವರ, ಯುವಕರಾದ ಚಿದಂಬರ ವೈದ್ಯ, ಕಲ್ಲನಗೌಡ ಮುಲ್ಕಿಪಾಟೀಲ, ಸುಚಿತ ಅಂಗಡಿ, ಸತೀಶ ದೇಸಾಯಿ, ಕೇಶವ ಬಿಳಗಿ, ಚವಾಣ್ ಸೇರಿದಂತೆ ನೂರಾರು ನಾಗರಿಕರು, ಮಹಿಳೆಯರು ಪಾಲ್ಗೊಂಡಿದ್ದರು.

Exit mobile version