ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.24 : ಇಂದು ಶಿರಡಿನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಸ್ತೆ ಸುರಕ್ಷತಾ ಮಾಸ-2024 ಅಭಿಯಾನದ ಅಂಗವಾಗಿ ರಸ್ತೆ ಸುರಕ್ಷತೆ -ಮೊದಲ ಆದ್ಯತೆ ಕುರಿತಂತೆ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ರಸ್ತೆ ಸುರಕ್ಷತೆ ಕುರಿತು ಮತ್ತು ಅನುಸರಿಸಬೇಕಿರುವ ರಸ್ತೆ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತಾದ ಕರಪತ್ರಗಳನ್ನು ವಿತರಿಸಲಾಯಿತು ಮತ್ತು ರಸ್ತೆ ಸುರಕ್ಷತೆಯ ಘೋಷಣೆಗಳುಳ್ಳ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.
ಶಿಬಿರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ವಿ.ದಿನಮಣಿ, ಅವರು ಕಾಲೇಜಿನ ಭೋದಕ, ಭೋದಕೇತರ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರಸ್ತೆ ಸುರಕ್ಷತೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಆರ್.ಹೆಚ್.ರಟಗೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಿಬಿರದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ವಿರೂಪಾಕ್ಷ ಆನೇಪ್ಪಗೋಳ, ಡಾ.ಸಾರಿಕಾ ಪಾಟೀಲ, ಡಾ.ಉಮಾದೇವಿ ಸಿ.ಜೆ. ಹಾಗೂ ಡಾ.ಎನ್.ಎಮ್.ಸಂಗಮನವರ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.