ಬೆಂಗಳೂರು, ಜನವರಿ 08 (ಕರ್ನಾಟಕ ವಾರ್ತೆ):
ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಾಧೀಶರಾಗಿದ್ದ ದಿ.ಎನ್.ಕೆ.ಪಾಟೀಲರು ಧಾರವಾಡ ಮತ್ತು ಕಲಬುರಗಿ ಸಂಚಾರಿ ನ್ಯಾಯಪೀಠ ಸ್ಥಾಪಿಸುವಲ್ಲಿ ಮುಖ್ಯ ರೂವಾರಿಗಳು ಎಂದು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ.ವರಾಳೆ ಅವರು ತಿಳಿಸಿದರು.
ಅವರು ಇಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ದಿ.ಎನ್.ಕೆ. ಪಾಟೀಲ್ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ದಿನಾಂಕ: 02-05-1954 ರಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಎನ್.ಕೆ. ಪಾಟೀಲ್ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು 1982 ರಲ್ಲಿ ನ್ಯಾಯಾಧೀಶರಾದ ಶಿವರಾಜ ಪಾಟೀಲ್ ಅವರಲ್ಲಿಗೆ ಸೇರಿ ವಕೀಲ ವೃತ್ತಿ ಪ್ರಾರಂಭಿಸಿದರು. ಆನಂತರ 2000 ರಲ್ಲಿ ಕನಾಟಕ ಉಚ್ಛ ನ್ಯಾಯಾಲಯದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನಂತರ 2002 ರಿಂದ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಬಿಬಿಎಂಪಿ, ಬಿಡಿಎ, ಬಿಎಂಆರ್‍ಸಿ ಅಡಿಯಲ್ಲಿದ್ದ ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಸಲ್ಲಿಸುವ ಸಮಿತಿಯ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ದಿ.ನ್ಯಾಯಾಧೀಶರಾದ ಎನ್.ಕೆ.ಪಾಟೀಲರು ಇತರರಿಗೆ ಸ್ಫೂರ್ತಿಯಾಗುವಂತೆ ಕೆಲಸ ನಿರ್ವಹಿಸಿದರು. ಇವರ ಸೇವೆ ವಕೀಲ ವೃತ್ತಿಯವರಿಗೆ ಮಾದರಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಕನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ವಿಶಾಲ್ ರಘು ಸಹ ಅಗಲಿದ ನಿವೃತ್ತ ನ್ಯಾಯಾಧೀಶರಾದ ಎನ್.ಕೆ.ಪಾಟೀಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರು ಹಾಗೂ ನ್ಯಾಯಾಧೀಶರು ಉಪಸ್ಥಿತರಿದ್ದರು.