ಬೆಂಗಳೂರು, ಜನವರಿ 04 (ಕರ್ನಾಟಕ ವಾರ್ತೆ):
ಸಮಾಜದ ರಕ್ಷಣೆ ನಮ್ಮ ಹಕ್ಕು. ವಕೀಲರು ಗೌರವದಿಂದ ವರ್ತನೆ ಮಾಡಬೇಕು, ವಕೀಲ ವೃತ್ತಿಗೆ ಗೌರವ ನೀಡುವುದು ತಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.
ಇಂದು ವಕೀಲರ ಸಂಘದ ವತಿಯಿಂದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ವಕೀಲರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು. ಸಮಾಜದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಗೂಂಡಾಗಳಂತೆ ವರ್ತನೆ ಮಾಡಬಾರದು. ವಕೀಲರು ವೃತ್ತಿಧರ್ಮವನ್ನು ಪಾಲನೆ ಮಾಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳ, ಉಪಮುಖ್ಯಮಂತ್ರಿಗಳ, ಕಾನೂನು ಸಚಿವರ ಮತ್ತು ಗೃಹ ಸಚಿವರ ಇಚ್ಛಾಶಕ್ತಿಯಿಂದ ವಕೀಲರ ಕಾಯ್ದೆ ಜಾರಿಗೆ ಬಂದಿದೆ. ವಕೀಲರ ಮೇಲಿರುವ ಅಭಿಮಾನದಿಂದ ವಕೀಲರ ಕಾಯ್ದೆಯನ್ನು ಮಾನ್ಯ ಕಾನೂನು ಸಚಿವರು ಉಭಯಸದನಗಳಲ್ಲಿ ಮಂಡಿಸಿದ್ದು, ವಕೀಲರ ಕಾಯ್ದೆ ಜಾರಿಗೆ ಬಂದಿದೆ. 2018ರಲ್ಲಿ ವಕೀಲರ ಕಾಯ್ದೆ ಸಮಿತಿಯನ್ನು ರಚಿಸಲಾಗಿತ್ತು. ಕಾರಣಾಂತರಗಳಿಂದ ಕಾಯ್ದೆ ಜಾರಿಗೆ ಬರಲಿಲ್ಲ. ಸುಮಾರು 15 ಸಾವಿರ ವಕೀಲರು ಹೋರಾಟದಲ್ಲಿ ಭಾಗವಹಿಸಿ ಹೋರಾಟದ ಫಲವಾಗಿ ಈ ಕಾಯ್ದೆ ಇಂದು ಜಾರಿಗೆ ಬಂದಿದೆ ಎಂದರು.