Site icon MOODANA Web Edition

ಯುವನಿಧಿ ಯೋಜನೆಗೆ ನೋಂದಣಿ

ಬೆಂಗಳೂರು, ಜನವರಿ 04 (ಕರ್ನಾಟಕ ವಾರ್ತೆ):

ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯ ಫಲಾನುಭವಿಗಳ ನೋಂದಣಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು  2023 ನೇ ಡಿಸೆಂಬರ್ 26 ರಂದು ಚಾಲನೆ ನೀಡಿದ್ದು, ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯ ಅಡಿಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಅಧ್ಯಯನ ಮಾಡಿ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವ್ಯತಿಪರ ಕೋರ್ಸ್‍ಗಳು ಸೇರಿದಂತೆ) ಪ್ರತಿ ತಿಂಗಳು ರೂ. 3,000/- ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ. 1,500/- ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೀಡಲಾಗುತ್ತದೆ.

 ಅನ್ವಯವಾಗುವ ನಿರುದ್ಯೋಗ ಭತ್ಯೆಯನ್ನು ಫಲಾನುಭಾವಿಗಳ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ನಿರುದ್ಯೋಗ ಸ್ಥಿತಿಯ ಬಗ್ಗೆ ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.

ಪದವಿ/ಡಿಪ್ಲೋಮಾ ನಂತರ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವವರು, ಶಿಶಿಕ್ಷು ವೇತನವನ್ನು ಪಡೆಯುತ್ತಿರುವವರು, ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು ಹಾಗೂ ಕರ್ನಾಟಕದಲ್ಲಿ ಕನಿಷ್ಠ ಆರು ವರ್ಷಗಳಿಗಿಂತ ಕಡಿಮೆ ವಾಸವಿಲ್ಲದಿರುವ ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ಅರ್ಹರಾಗುವುದಿಲ್ಲ.

ಆಸಕ್ತ ಅಭ್ಯರ್ಥಿಗಳು www.sevasindhugs.karnataka.gov.in ಮೂಲಕ ನೋಂದಣಿ ಮಾಡಲು ತಿಳಿಸಲಾಗಿದೆ. ಪದವಿ/ಡಿಪೆÇ್ಲೀಮಾ ತೇರ್ಗಡೆ ಹೊಂದಿ 180 ದಿನಗಳೊಳಗೆ ಇರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆದರೆ ಈ ಅಭ್ಯರ್ಥಿಗಳು 180 ದಿನಗಳ ನಂತರ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ. ಯೋಜನೆಯ ಅರ್ಹ ಅಭ್ಯರ್ಥಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಲು ಪ್ರತಿ ತಿಂಗಳ 1 ರಿಂದ 25ನೇ ತಾರೀಖಿನೊಳಗೆ ಘೋಷಣೆಯನ್ನು ಆನ್‍ಲೈನ್‍ನಲ್ಲಿ ದಾಖಲು ಮಾಡುವುದು ಕಡ್ಡಾಯವಾಗಿರುತ್ತದೆ.

ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು www.sevasindhugs.karnataka.gov.in ಅಂತರ್ಜಾಲ ತಾಣದಿಂದ ಅಥವಾ ಸಹಾಯವಾಣಿ ಸಂಖ್ಯೆ: 1800-599-9918 ಇಂದ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Exit mobile version