ಹುಬ್ಬಳ್ಳಿ (ಕರ್ನಾಟಕವಾರ್ತೆ) ಡಿ.29: ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ರಾಜ್ಯ ಸರ್ಕಾರವು ವಿಮಾ ಯೋಜನೆ ಜಾರಿಗೊಳಿಸಿದ್ದು, ಎಲ್ಲ ಅರ್ಹ ಗಿಗ್ ಕಾರ್ಮಿಕರು ಸೇವಾಸಿಂಧು ಫೋರ್ಟಲ್‍ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ ಡೆಲವರಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ಸಾಮಾಜಿಕ ಭದ್ರತಾ ಸಂಹಿತೆ ಅನ್ವಯ ಇ-ಕಾಮರ್ಸ್ ಸಂಸ್ಥೆಗಳಾದ ಸ್ವಿಗ್ಗಿ, ಜ್ಹೊಮ್ಯಾಟೋ, ಅಮೇಜಾನ್, ಬಿಗ್ ಬಾಸ್ಕೆಟ್, ಫ್ಲಿಪ್‍ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೊ ಬಿಗ್ ಬಾಸ್ಕೆಟ್, ಡೊಮಿನೊಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ಅರೆಕಾಲಿಕ ಡೆಲಿವರಿ ವೃತ್ತಿಯಲ್ಲಿ ತೊಡಗಿರುವ 18 ರಿಂದ 60 ವರ್ಷದೊಳಗಿನ ನೌಕರರು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.
ಅಸಂಘಟಿತ ವಲಯ ಕಾರ್ಮಿಕರು ಯಾವುದೇ ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಭವಿಷ್ಯನಿಧಿ ಹಾಗೂ ಇಎಸ್‍ಐ ಫಲಾನುಭವಿಯಾಗಿರಬಾರದು, ಆಧಾರ್ ಸಂಖ್ಯೆ, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ, ವೇತನ ಚೀಟಿ, ವೇತನ ಪಡೆದ ಬ್ಯಾಂಕ್ ಪಾಸ್‍ಬುಕ್ ಹಾಗೂ ಇ-ಶ್ರಮ್ ಕಾರ್ಡ್ ದಾಖಲೆಗಳನ್ನು ಹೊಂದಿರಬೇಕು.
ಹೆಸರು ನೋಂದಣಿ ಮಾಡಿಕೊಳ್ಳುವುದರಿಂದ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ಫಲಾನುಭವಿಗಳಾಗಲಿದ್ದು, ಅಪಘಾತದಿಂದ ಮರಣ ಹೊಂದಿದ್ದಲ್ಲಿ ವಿಮಾ ಪರಿಹಾರ 2 ಲಕ್ಷ ರೂ ಹಾಗೂ ಜೀವ ವಿಮಾ 2 ಲಕ್ಷ ರೂ ಸೇರಿ ಒಟ್ಟು 4 ಲಕ್ಷ ರೂ, ಅಪಘಾತದಿಂದ ಶಾಶ್ವತ ದುರ್ಬಲ ಹೊಂದಿದ್ದಲ್ಲಿ 2 ಲಕ್ಷ ರೂ ವರೆಗೆ ಸೌಲಭ್ಯ, ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರೂ ವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ) ವಿಮಾ ಸೌಲಭ್ಯವಿರುತ್ತದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗಿಗ್ ಕಾರ್ಮಿಕರು ಯೋಜನೆಯ ಸದುಪಯೋಗ ಪಡೆಯಲು ಸೇವಾ ಸಿಂಧು ಫೋರ್ಟಲ್ ಅಥವಾ ನೇರವಾಗಿ ಕಾರ್ಮಿಕ ಇಲಾಖೆಯ ಕಛೇರಿಯನ್ನು ಸಂಪರ್ಕಿಸುವ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ ಉಪ ವಿಭಾಗ-02 ಕಛೇರಿ ಹುಬ್ಬಳ್ಳಿ ಅಥವಾ ಹಿರಿಯ/ ಕಾರ್ಮಿಕ ನಿರೀಕ್ಷಕರುಗಳ ಕಛೇರಿ, ಧಾರವಾಡ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳ ಕಚೇರಿ ಮತ್ತು ಹಿರಿಯ/ಕಾರ್ಮಿಕ ನಿರೀಕ್ಷಕರ ಕಛೇರಿ ಹುಬ್ಬಳ್ಳಿ, ಧಾರವಾಡ ಹಾಗೂ ಕಲಘಟಗಿ ಕಛೇರಿಗಳನ್ನು ಸಂಪರ್ಕಿಸಬಹುದು ಹುಬ್ಬಳ್ಳಿ ಉಪವಿಭಾಗ-2 ಕಾರ್ಮಿಕ ಇಲಾಖೆ ಅಧಿಕಾರಿ ಮಾರಿಕಾಂಬ ಎಂ ಹುಲಕೋಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.