Site icon MOODANA Web Edition

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಪರಿಷ್ಕೃತ ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 27(ಕರ್ನಾಟಕ ವಾರ್ತೆ):

ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ:01.01.2024ರ ಸಂಬಂಧ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ವೇಳಾಪಟ್ಟಿಯನ್ನು ಪರಿಷ್ಕರಿಸಿ ಅಂತಿಮ ದಿನಾಂಕ ಹೊರಡಿಸಿದ್ದು, ತಿದ್ದುಪಡಿ, ವಿಳಾಸ ಬದಲಾವಣೆ, ವಿವಿಧ ನಮೂನೆಯ ಅರ್ಜಿ ಫಾರಂ ಸಲ್ಲಿಸಲು  ಅವಕಾಶ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು 2024ರ ಜ.01 ರವರೆಗೆ ಅವಧಿ ನಿಗದಿಪಡಿಸಿದೆ. ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿ ಪಡೆಯುವುದು ಹಾಗೂ ಡೇಟಾಬೇಸ್‍ನ್ನು ನವೀಕರಿಸುವುದು, ಪೂರಕಗಳ ಮುದ್ರಣ ಅವಧಿ 2024ರ ಜ.17 ಮತ್ತು 2024 ರ ಜ.22 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದೆ.

ಅರ್ಹತಾ ದಿನಾಂಕ:01.01.2024ಕ್ಕೆ 18 ವರ್ಷ ಪೂರ್ಣಗೊಂಡ ಎಲ್ಲಾ ಅರ್ಹ ಮತದಾರರು ನಮೂನೆ-6 ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ, ಭಾವಚಿತ್ರ ತಿದ್ದುಪಡಿಗಾಗಿ ನಮೂನೆ-8 ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಮರಣ ಹೊಂದಿದ ಮನೆಯ ಸಂಬಂಧಿಕರು) ನಮೂನೆ-7 ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ದಿನಾಂಕ:27.12.2023 ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ನಮೂನೆ-6, 7 ಮತ್ತು 8 ರಲ್ಲಿ ಚುನಾವಣಾ ಆಯೋಗವು ಸೂಚಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ಮತದಾರರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು, ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version