31.7 C
Karnataka
Wednesday, February 5, 2025
spot_img

ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ “ಯುವನಿಧಿ” ಯೋಜನೆ ಜಾರಿ:ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ):  

ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಯುವನಿಧಿ” ಯೋಜನೆಯನ್ನು ಯುವಜನತೆಯ  ಉಜ್ವಲ ಭವಿಷ್ಯಕ್ಕಾಗಿ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕೌಶಲ್ಯಾಭಿವೃದ್ಧಿ, ಉದದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ “ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ” ನೀಡಿ ಮಾತನಾಡಿದರು.

2022-23ನೇ ಸಾಲಿನಲ್ಲಿ  ಪದವಿ ಹಾಗೂ  ಡಿಪ್ಲೊಮದಲ್ಲಿ ಉತ್ತೀರ್ಣರಾಗಿ 6 ತಿಂಗಳ ಕಾಲ ಉದ್ಯೋಗ ದೊರಕದ ಯುವಕ-ಯುವತಿಯರಿಗೆ ಗರಿಷ್ಠ 2 ವರ್ಷಗಳ ಅವಧಿಗೆ ಪದವೀಧರರಿಗೆ ಮಾಹೆಯಾನ 3 ಸಾವಿರ ಹಾಗೂ ಡಿಪ್ಲೊಮ ಪಡೆದವರಿಗೆ ಮಾಹೆಯಾನ 1,500 ರೂ.ಗಳ ನಿರುದ್ಯೋಗ ಭತ್ಯೆಯನ್ನು 2024 ಜನವರಿ ಮಾಹೆಯಿಂದ ನೇರವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ  ಖಾತೆಗೆ ಜಮೆ ಮಾಡಲಾಗುವುದು. 2 ವರ್ಷಗಳ ಅವಧಿಯಲ್ಲಿ ಉದ್ಯೋಗ ದೊರೆತರೆ ನಿರುದ್ಯೋಗ ಭತ್ಯೆ ನಿಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ 5 ಲಕ್ಷ 29 ಸಾವಿರ ಯುವಕ-ಯುವತಿಯರಿದ್ದು, ಇವರಲ್ಲಿ ಪದವಿ ಪಡೆದವರು 4 ಲಕ್ಷ 21 ಸಾವಿರ, ಡಿಪ್ಲೊಮೊ ಪಡೆದವರು 48 ಸಾವಿರ ಇದ್ದು, ಈ ವರ್ಷ ಯುವನಿಧಿಗೆ 250 ಕೋಟಿ ಖರ್ಚಾಗಲಿದೆ ಎಂದ ಮುಖ್ಯಂತ್ರಿಗಳು,  ಈ ಯೋಜನೆಗೆ  ಇಂದಿನಿಂದ ಸೇವಾ ಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ,  ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಸಮಾಜದಲ್ಲಿನ  ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಿರುದ್ಯೋಗ ಭತ್ಯೆಯ ಜೊತೆಗೆ, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉದ್ಯೋಗಳಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಅವಕಾಶ ಕಲ್ಪಿಸುವುದರ ಜೊತೆಗೆ, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೂ ಸಹ ಹೆಚ್ಚಿನ  ಪ್ರೋತ್ಸಾಹ ನೀಡಲಾಗುವುದು.  ಇದರಿಂದ ಉದ್ಯೋಗ ಸೃಷ್ಟಿಸಿದಂತಾಗುತ್ತದೆ ಎಂದರು.

ರಾಜ್ಯ ಜನತೆಗೆ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದರು.  
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಯುವಜನತೆಯ ಬದುಕಿನಲ್ಲಿ ಬದಲಾವಣೆ ತರಲು ಯುವನಿಧಿ ಯೊಜನೆಯನ್ನು ಜಾರಿಗೊಳಿಸಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.  ಇದೇ ಸಂದರ್ಭದಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಅನಾವರಣ ಮಾಡಿದರು.

ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ರುದ್ರಪ್ಪ ಪಾಟೀಲ ಮಾತನಾಡಿ, ನಿಗಧಿತ ಕಾಲಾವಧಿಯಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಯುವಜನತೆಯ ಭವಿಷ್ಯದ ಬಗ್ಗೆ ನಮ್ಮ ಸರ್ಕಾರಕ್ಕೆ ಹೆಚ್ಚು ಕಾಳಜಿ ಇದೆ. ಖಾಸಗಿ ಸಂಸ್ಥೆಗಳಿಗೆ ಅಗತ್ಯವಿರುವ ಕೌಶಲ್ಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖಾ ಸಚಿವ ಬಿ.ನಾಗೇಂದ್ರ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಡಾ.ಕೆ.ಗೋವಿಂದರಾಜ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾ ಮಹಾದೇವನ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಾದ ಡಾ. ರಾಗಪ್ರಿಯ ಆರ್. ಯುವಕ-ಯುವತಿಯರು ಉಪಸ್ಥಿತರಿದ್ದರು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!