Site icon MOODANA Web Edition

ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ವೇಬ್ರಿಡ್ಜ್‍ಗಳಲ್ಲಿ ಉಚಿತ ತೂಕ ವ್ಯವಸ್ಥೆ

ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ):

ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರು ಮಾರುಕಟ್ಟೆಗಳಿಗೆ ತರುವ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಪಡೆಯುವಂತೆ ಕ್ರಮವಹಿಸುವುದು ಇಲಾಖೆಯ ಪ್ರಮುಖ ಧ್ಯೇಯೋದೇಶಗಳಲ್ಲೊಂದಾಗಿದೆ. ರೈತರು ಮಾರುಕಟ್ಟೆಗಳಿಗೆ ತರುವ ಕೃಷಿ ಉತ್ಪನ್ನಗಳಿಗೆ ನಿಖರವಾದ ತೂಕ ಮತ್ತು ಮೌಲ್ಯ ನಿರ್ಧರಣೆಯಲ್ಲಿ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಸಮಿತಿಯಿಂದ ಹಾಗೂ ಖಾಸಗಿ ಏಜೆನ್ಸಿ / ವ್ಯಕ್ತಿಗಳಿಗೆ ಲೀವ್ & ಲೈಸೆನ್ಸ್ ಮೇಲೆ ವೇ ಬ್ರಿಡ್ಜ್ ಹಂಚಿಕೆ ಮಾಡಿ ಮಾರುಕಟ್ಟೆಗೆ ಬರುವ ರೈತರ ಉತ್ಪನ್ನಗಳಿಗೆ ನಿಖರವಾದ ತೂಕದ ಸೌಲಭ್ಯ ಒದಗಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೃಷಿ ಉತ್ಪನ್ನಗಳಲ್ಲಿ ಕಬ್ಬು ಬೆಳೆ ಕೂಡ ಪ್ರಮುಖ ಉತ್ಪನ್ನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯುವ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಲ್ಲಿ ತೂಕದ ವ್ಯತ್ಯಾಸದಿಂದ ಉತ್ತಮ ಬೆಲೆ ದೊರೆಯದೆ ಇರುವುದೂ ಕೂಡ ಒಂದು ಕಾರಣವಾಗಿರುತ್ತದೆ. ಡಿಸೆಂಬರ್ 21 ರಂದು ಇಲಾಖೆಯ ಕೇಂದ್ರ ಕಚೇರಿಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಚಿವರು ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ಉಚಿತವಾಗಿ ನಿಖರವಾದ ತೂಕದ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಈ ಹಿನ್ನೆಲೆ ಕಬ್ಬು ಹಂಗಾಮಿ ಬೆಳೆಯಾಗಿರುವುದರಿಂದ ಹೆಚ್ಚು ಆವಕವಿರುವ ಸಮಯದಲ್ಲಿ ವೇಬ್ರಿಡ್ಜ್ ಗಳನ್ನು ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮಾರುಕಟ್ಟೆಗೆ ಬರುವ ಕಬ್ಬು ಬೆಳೆಯುವ ರೈತರಿಗೆ ಉಚಿತವಾಗಿ ತೂಕದ ವ್ಯವಸ್ಥೆ ಒದಗಿಸಲು ಕ್ರಮ ತೆಗೆದುಕೊಳ್ಳುವುದು. ಮಾರುಕಟ್ಟೆಗೆ ಬರುವ ರೈತರ ಹೆಸರು, ಆಧಾರ್ ಸಂಖ್ಯೆ, ವಾಹನ ಸಂಖ್ಯೆ ಮಾರುಕಟ್ಟೆಗೆ ಬರುವ ಉತ್ಪನ್ನದ ಪ್ರಮಾಣ(ಕಬ್ಬು) ತೂಕದ ಮಾಹಿತಿ ಮತ್ತು ಪಹಣಿಯ ವಿವರಗಳನ್ನು ಕಡತದಲ್ಲಿ ನಿರ್ವಹಿಸುವುದು.

ಸಮಿತಿಗಳ ವೇ ಬ್ರಿಡ್ಜ್‍ಗಳನ್ನು ಖಾಸಗಿ ಏಜೆನ್ಸಿ/ವ್ಯಕ್ತಿಗಳು ನಿರ್ವಹಿಸುತ್ತಿದ್ದಲ್ಲಿ ಸದರಿಯವರಿಂದಲೂ ಕೂಡ ಉಚಿತವಾಗಿ ತೂಕದ ವ್ಯವಸ್ಥೆ ಒದಗಿಸಲು ಕ್ರಮವಹಿಸುವುದು. ಸದರಿಯವರು ನೀಡಿದ ಸೇವೆ ಶುಲ್ಕವನ್ನು ಮಾಸಿಕವಾಗಿ ಸಮಿತಿಗೆ ಭರಿಸುವ ಮೊತ್ತದಲ್ಲಿ ಕಡಿತಗೊಳಿಸುವುದು ಹಾಗೂ ಈ ಸಂಬಂಧ ರೈತರ ಎಲ್ಲಾ ದಾಖಲಾತಿಗಳನ್ನು ಕಡತದಲ್ಲಿ ನಿರ್ವಹಿಸಲು ತಿಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Exit mobile version