ಹುಬ್ಬಳ್ಳಿ (ಕರ್ನಾಟಕವಾರ್ತೆ) ಡಿ.26: ಹುಬ್ಬಳ್ಳಿ ತಾಲೂಕು ಆಡಳಿತ ಸಭಾಭವನದಲ್ಲಿ ಜನೇವರಿ 1-2024 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವಕರ್ಮ ಅಮರ ಶಿಲ್ಪಿ ಜಕನಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ತಾಲೂಕು ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಹುಬ್ಬಳ್ಳಿ ತಾಲೂಕು ತಹಸೀಲ್ದಾರ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಕಲಗೌಡ್ರ ಪಾಟೀಲ ಅವರು ಮಾತನಾಡಿ ವಿಶ್ವಕರ್ಮ ಜಕನಾಚಾರಿಯವರು ನಮ್ಮ ನಾಡಿಗೆ ನೀಡಿರುವ ಕೊಡುಗೆ ಅಪಾರ ಅವರು ನಿರ್ಮಿಸಿರುವ ಐತಿಹಾಸಿಕ ದೇವಾಲಯಗಳ ಮೇಲಿನ ಸುಂದರ ಕೆತ್ತನೆಗಳು ಅವರ ಕಲಾ ನೈಪುಣ್ಯತೆಯನ್ನು ಕನ್ನಡಿಯಾಗಿದೆ. ಇಂದಿನ ಯುವ ಪೀಳಿಗೆಯು ಅವರ ಹಿನ್ನೆಲೆಯನ್ನು ಅರಿಯುವುದು ಅವಶ್ಯವಿದೆ.
ಹುಬ್ಬಳ್ಳಿ ತಾಲೂಕ ಆಡಳಿತ ಸಭಾಭವನದಲ್ಲಿ ಜನೇವರಿ-1-2024 ರಂದು ಬೆಳಿಗ್ಗೆ 11 ಗಂಟೆಗೆ ಅಮರ ಶಿಲ್ಪಿ ಜಕನಾಚಾರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಕಾರ್ಯಕ್ರಮದಲ್ಲಿ ಅಮರ ಶಿಲ್ಪಿ ಜಕನಾಚಾರಿಯವರ ಕುರಿತು ಉಪನ್ಯಾಸ ನೀಡಲಾಗುವುದು ಹಾಗೂ ವಿಶೇಷ ಸಾಧನೆಗೈದ ಶಿಲ್ಪಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಅವರು ಕಾರ್ಯಕ್ರಮದ ರೂಪರೇಷಗಳ ಬಗ್ಗೆ ವಿಸ್ತರಿಸಿದರು.
ಸಭೆಯಲ್ಲಿ ಸಮುದಾಯದ ಮುಖಂಡರಾದ ಎಸ್.ಎಮ್ ಕಮ್ಮಾರ, ಮೌನೇಶ ಬಡಿಗೇರ, ವಿನೋದ ಬಡಿಗೇರ, ಸುರೇಶ ದ್ಯಾಮಣ್ಣವರ, ರವಿಕುಮಾರ ಕಮ್ಮಾರ, ರಾಜು ಆಲೂರು ಹಾಜರಿದ್ದರು.