ಬೆಂಗಳೂರು, ಡಿಸೆಂಬರ್ 22 (ಕರ್ನಾಟಕ ವಾರ್ತೆ):
ಕರ್ನಾಟಕ ರಾಜ್ಯದ ಪೋಲೀಸ್ ಪಡೆ ಮುಖ್ಯಸ್ಥರಾದ ಮಹಾನಿರ್ದೇಶಕರು ಮತ್ತು ಪೋಲೀಸ್ ಮಹಾನಿರೀಕ್ಷಕರ ನಿರ್ದೇಶನದಂತೆ, ಡಿಸೆಂಬರ್ 20 ರಂದು ಮಾದಕ ದ್ರವ್ಯ ಹಾಗೂ ಡ್ರಗ್ಸ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಬೃಹತ್ ಅಭಿಯಾನವನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ನಗರ ಮತ್ತು ಜಿಲ್ಲೆಗಳಲ್ಲಿ ನಡೆಸಲಾಗಿದೆ.
ಪಿಎಸ್‍ಐ ಯಿಂದ ಎಸ್.ಪಿ/ಡಿ.ಸಿ.ಪಿ ಶ್ರೇಣಿವರೆಗಿನ ಪೋಲೀಸ್ ಅಧಿಕಾರಿಗಳು ರಾಜ್ಯದಾದ್ಯಂತ 2300ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ. ಪ್ರೆಸೆಂಟೇಷನ್, ವಿಚಾರ ವಿನಿಮಯ, ಸ್ಕಿಟ್ ಮುಖಾಂತರ ಈ ಕೆಟ್ಟ ವ್ಯಸನಕ್ಕೆ ಬಲಿಯಾಗಬಾರದೆಂದು ಸಾವಿರಾರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಲ್ಲಿ ಕರ್ನಾಟಕ ರಾಜ್ಯ ಪೋಲೀಸರು ಸಂಪೂರ್ಣ ಯಶಸ್ವಿಯಾಗಿರುತ್ತಾರೆ.
ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ 2023ರ ಡಿಸೆಂಬರ್ 21 ರಿಂದ 31ರವರೆಗೆ ವಿವಿಧ ಮಾದರಿಯ ಮಾದಕ ದ್ರವ್ಯ ಮತ್ತು ನಿಷಿದ್ದ ವಸ್ತುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲು ಸ್ಪೆಷಲ್ ಡ್ರೈವ್ ಸಹ ಹಮ್ಮಿಕೊಳ್ಳಲಾಗಿದೆ. ಡಿ.ಜಿ.ಪಿ. ರವರ ನಿರ್ದೇಶನದಂತೆ ಪಿ.ಎಸ್.ಐ. ದರ್ಜೆಯಿಂದ ಎಸ್.ಪಿ/ಡಿ.ಸಿ.ಪಿ ವರೆಗಿನ ಪ್ರತಿಯೊಬ್ಬ ಅಧಿಕಾರಿಗಳು ವೈಯಕ್ತಿಕವಾಗಿ ಕರ್ನಾಟಕ ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡುವ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.