Site icon MOODANA Web Edition

ಪಶುಪತಿಹಾಳದಲ್ಲಿ ವಿಜೃಂಭಣೆಯ ಶ್ರೀ ಸಿದ್ಧಾರೂಢರ ತಾತ್ವಿಕ ತೇರು

ಪಶುಪತಿಹಾಳ ,ತಾ.ಕುಂದಗೋಳ ನವೆಂಬರ್ 27:

ಸುಮಾರು ನೂರಕ್ಕೂ ಅಧಿಕ ವರ್ಷಗಳ ಪರಂಪರೆ ಹೊಂದಿರುವ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಶ್ರೀ ಸಿದ್ಧಾರೂಢರ ಮಠದಲ್ಲಿ ಶಿವನಾಮ ಸಪ್ತಾಹ ಸಮಾರೋಪ ಹಾಗೂ 11 ನೇ ವರ್ಷದ ತಾತ್ವಿಕ ತೇರಿನ ಉತ್ಸವ ವಿಜೃಂಭಣೆಯಿಂದ ಜರುಗಿತು.

 ಪಶುಪತಿಹಾಳ ಗ್ರಾಮದಲ್ಲಿ ಇಂದು (ನ.27 ರಂದು) ಸಂಜೆ ಶ್ರೀಸಿದ್ಧಾರೂಢರು ಹಾಗೂ ಶ್ರೀ ಗುರುನಾಥರೂಢರ ತಾತ್ವಿಕ ತೇರಿನ ಉತ್ಸವವು ಬಾಗಲಕೋಟ ಜಿಲ್ಲಾ ಅರಕೇರಿಯ ಕೌದೇಶ್ವರ ಸಾಧು ಸಂಸ್ಥಾನ ಮಠದ ಶ್ರೀ ಮಾಧವಾನಂದ ಮಹಾಸ್ವಾಮಿಗಳು,

ಹುಬ್ಬಳ್ಳಿ ಜಡಿಮಠ ಹಾಗೂ ಸುಳ್ಳ ಗ್ರಾಮದ ಶ್ರೀಸಿದ್ಧಾರೂಢ ಮಠದ ರಾಮಾನಂದ ಮಹಾಸ್ವಾಮಿಗಳು,ಹುಬ್ಬಳ್ಳಿ ನಾಸಿಕ ಶರಣಪ್ಪನ ಮಠದ ಶ್ರೀ ಬಸವಾನಂದ ಮಹಾಸ್ವಾಮಿಗಳು,ತಾವರಗೆರೆ ಮತ್ತು ಸಂಶಿ ಸಿದ್ಧಾರೂಢ ಮಠದ ಶ್ರೀ ನಿರ್ಗುಣಾನಂದ ಸ್ವಾಮಿಗಳು,ಬೈಲಹೊಂಗಲ ತಾಲೂಕು ನೇಗಿನಹಾಳದ ಶ್ರೀಅದ್ವೈತಾನಂದ ಭಾರತಿ ಸ್ವಾಮಿಗಳು,ಯಾದವಾಡ-ಮುಳಮುತ್ತಲದ ಶ್ರೀ ಆನಂದ ಮಹಾಸ್ವಾಮಿಗಳು,ಹನುಮನಹಳ್ಳಿಯ ಶ್ರೀಶಿವಬಸವ ಸ್ವಾಮಿಗಳು ,ಸವದತ್ತಿ ತಾಲ್ಲೂಕು ಕರಿಕಟ್ಟಿಯ ವೇ.ಮೂ.ಕುಮಾರಶಾಸ್ತ್ರಿಗಳು ಸೇರಿದಂತೆ ಅನೇಕ ಸಾಧು-ಸಂತರ ಸಾನಿಧ್ಯದಲ್ಲಿ ತಾತ್ವಿಕ ತೇರಿಗೆ ಚಾಲನೆ ದೊರೆಯಿತು.

ಮಹಿಳಾ ಡೊಳ್ಳು ಕುಣಿತ,ಕೋಲಾಟ,ಕರಡಿ ಮಜಲು, ದಾಲಪಟ ಗೊಂಬೆ ಕುಣಿತ,ಕುಂಭ,ಆರತಿ ಮತ್ತಿತರ ಕಲಾಪ್ರಕಾರಗಳ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ತೇರು ಸಂಚರಿಸಿತು.

 ನಿಜಗುಣ   ಕೈವಲ್ಯ ಜ್ಞಾನಪದ್ಧತಿಯ ಜ್ಞಾನ ಪ್ರತಿಪಾದನಾ ಸ್ಥಲದ ಬ್ರಹ್ಮ ಜಿಜ್ಞಾಸೆಯು ಏಳುದಿನಗಳ ಕಾಲ ಪ್ರತಿದಿನ ಮುಂಜಾನೆ ಹಾಗೂ ಸಂಜೆಯ ಅವಧಿಯಲ್ಲಿ ನಡೆಯಿತು.

 ನಿರಂತರವಾಗಿ ದಿನದ 24 ಗಂಟೆಗಳ ಕಾಲವೂ  ಏಕತಾರಿಯನ್ನು ನೆಲಕ್ಕೆ ಸ್ಪರ್ಶಿಸದೇ , ಭಕ್ತರು ಸರದಿಯಂತೆ ಹೊತ್ತುಕೊಂಡು ಸತತ ಏಳು ದಿನಗಳ ಅಖಂಡ ಶಿವನಾಮ ಸ್ಮರಣೆ ನಡೆಸುವುದು ಇಲ್ಲಿನ ವಿಶೇಷವಾಗಿದೆ. ಅಕ್ಕನ ಬಳಗದ ಮಹಿಳಾ ಸದಸ್ಯರಿಂದ ಭಜನೆ, ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು. ನಿರಂತರ ಏಳು ದಿನಗಳ ಕಾಲ ಅನ್ನ ದಾಸೋಹ ನಡೆಯಿತು ಎಂದು ಪಶುಪತಿಹಾಳ ಶ್ರೀಸಿದ್ಧಾರೂಢ ಮಠದ ಪ್ರಕಟಣೆ ತಿಳಿಸಿದೆ.

Exit mobile version