ಬೆಂಗಳೂರು, ನವೆಂಬರ್ 23 (ಕರ್ನಾಟಕ ವಾರ್ತೆ):
ರೆಟ್ರೋ ರಿಪ್ಲೆಕ್ಟೀವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್ ಅಳವಡಿಸುವುದನ್ನು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದ್ದು, ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ-104ರಲ್ಲಿ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟೀವ್ ಟೇಪ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 104, 104ಎ, 104ಬಿ, 104ಸಿ, ಮತ್ತು 104ಇ ಗಳಲ್ಲಿ ಮೋಟಾರು ವಾಹನಗಳಿಗೆ ರೆಟ್ರೋ ರಿಪ್ಲೆಕ್ಟೀವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್ ಗಳನ್ನು ಯಾವ ವಿಧದಲ್ಲಿ ಅಳವಡಿಸಬೇಕು ಎಂಬ ಬಗ್ಗೆ ನಿರ್ದೇಶನ ನೀಡಲಾಗಿರುತ್ತದೆ.
ವಾಹನಗಳು ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ವಾಹನಗಳ ಟೆಲ್ ಲ್ಯಾಂಪ್, ಇಂಡಿಕೇಟರ್‍ಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಸಹ ರೆಟ್ರೋ ರಿಪ್ಲೆಕ್ಟೀವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್‍ಗಳಿಂದ ವಾಹನಗಳ ಚಲನವಲನವನ್ನು ಇತರೆ ವಾಹನಗಳ ಚಾಲಕರು ಶೀಘ್ರವಾಗಿ ಗುರುತಿಸಲು ಸಹಾಯಕವಾಗುವುದಲ್ಲದೆ, ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ರಸ್ತೆ ಸುರಕ್ಷತೆ ಹಾಗೂ ಸಾರ್ವಜನಿಕರ ಮತ್ತು ಮೋಟಾರು ವಾಹನ ಮಾಲೀಕರು/ ಚಾಲಕರ ಹಿತದೃಷ್ಟಿಯಿಂದ ಇಂತಹ ಸಾರಿಗೆ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟೀವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸುವಂತೆ ಈಗಾಗಲೇ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ಆದೇಶದಲ್ಲಿ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ನೀಡಿಕೆ ಮತ್ತು ನವೀಕರಣ ಸಮಯದಲ್ಲಿ ರೆಟ್ರೋ ರಿಪ್ಲೆಕ್ಟೀವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್ ಅಳವಡಿಸಿರುವುದನ್ನು ಹಾಗೂ ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ-104ರ ಪಾಲನೆಯಾಗುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವಂತೆ ಆದೇಶಿಸಿರುತ್ತದೆ. ಆದುದರಿಂದ ಸಾರಿಗೆ ವಾಹನಗಳಿಗೆ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ರೆಟ್ರೋ ರಿಪ್ಲೆಕ್ಟೀವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.