ಬೆಂಗಳೂರು, 23ನೇ ನವೆಂಬರ್(ಕರ್ನಾಟಕ ವಾರ್ತೆ):
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ನ್ಯಾಯಮೂರ್ತಿ ಸಿ. ಸುಮಲತಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಕೋರ್ಟ್ ಹಾಲ್ 1 ರಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಿ. ಸುಮಲತಾ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಲ್ ವಿಶಾಲ್ ರಘು ಅವರು ಮಾತನಾಡಿ ದಿ.ಚೆಲ್ಲಕುರಿ ವೆಂಕಟ ಸುಬ್ಬಯ್ಯ ಮತ್ತು ದಿ. ಲಕ್ಷ್ಮೀ ಪ್ರಸನ್ನ ಅವರ ಹಿರಿಯ ಮಗಳಾಗಿ ಜನಿಸಿದ್ದು ಸಾಂವಿಧಾನಿಕ ಕಾನೂನಿನಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ಹತ್ತು ವರ್ಷಗಳ ಕಾಲ ವಕೀಲರಾಗಿ ಸಕ್ರಿಯವಾಗಿ ಅಭ್ಯಾಸ ಮಾಡಿದ್ದಾರೆ. 2007 ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನೂಲ್ ಮತ್ತು ಗುಂಟೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ಹಾಗೂ ಹೈದರಾಬಾದ್‍ನ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಹೈದರಾಬಾದ್‍ನ ಸಿಟಿ ಸಿವಿಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿ ಸಾಂವಿಧಾನಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯಾಯಾಂಗದ ಅಗತ್ಯವಾಗಿರುವ ರೈಟ್ ಟು ಸ್ಫೀಡಿ ಜಸ್ಟೀಸ್ ಇನ್ ಇಂಡಿಯಾ ಎ ಕ್ರಿಟಿಕಲ್ ಅನಲೈಸಸ್ಸ್ ಎಂಬ ಪ್ರಮುಖ ವಿಷಯದ ಕುರಿತು ಕಾನೂನಿನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. 15ನೇ ಅಕ್ಟೋಬರ್, 2021 ರಂದು ತೆಲಂಗಾಣ ರಾಜ್ಯದ ಹೈಕೋರ್ಟ್‍ನ ಖಾಯಂ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟಿದ್ದರು ಎಂದರು.
ತೆಲಂಗಾಣದ ಹೈಕೋರ್ಟ್‍ನಿಂದ ಕರ್ನಾಟಕ ಹೈಕೋರ್ಟ್ ವರ್ಗಾವಣೆಯು ದೇಶದ ಏಕತೆಯನ್ನು ಮಾತ್ರವಲ್ಲದೆ ರಾಷ್ಟ್ರೀಯ ಏಕತೆಯನ್ನು ಸಂಕೇತಿಸುತ್ತದೆ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನ್ಯಾಯಕ್ಕಾಗಿ ಕೋರ್ಟಿನ ಮೊರೆ ಹೋಗುವ ಲಕ್ಷಾಂತರ ಜನರ ಕಣ್ಣೀರನ್ನು ಒರೆಸುತ್ತಿದೆ. ನ್ಯಾಯಾಲಯದಲ್ಲಿ ನೀವು ಸ್ಫೂರ್ತಿಯ ಮೂಲವಾಗಿರುತ್ತೀರಿ ಎಂದರು.
ನ್ಯಾಯಮೂರ್ತಿ ಸಿ. ಸುಮಲತಾ ಅವರು ಮಾತನಾಡಿ ತೆಲಂಗಾಣ ನ್ಯಾಯಾಲಯವು ವಿವಿಧ ಅನುಭವ ಮತ್ತು ಜ್ಞಾನವನ್ನು ನೀಡಿದೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರ ಅತ್ಯುತ್ತಮ ವಾದಗಳೊಂದಿಗೆ ನಾನು ಉತ್ತಮ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಭಾಷೆಯನ್ನು ಕಲಿಯುತ್ತೇನೆ ಅದು ನನ್ನ ಸೇವೆಯನ್ನು ಸಮರ್ಥವಾಗಿ ಪರಿಣಾಮಕಾರಿಯಾಗಿ ಸೇವೆಯನ್ನು ಸಲ್ಲಿಸಲು ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬೆಂಗಳೂರು, ಕಲಬುರಗಿ ಧಾರವಾಡ ವಿಭಾಗದ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.