ಹುಬ್ಬಳ್ಳಿ (ಕರ್ನಾಟಕವಾರ್ತೆ) ನ.22: ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತಕಣಗಳು ಅಥವಾ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ ಅನೀಮಿಯ ಕಾರಣವಾಗುತ್ತದೆ ಎಂದು ಹುಬ್ಬಳ್ಳಿ ತಾಲೂಕು ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮೀ ಸೊಪ್ಪನ್ ಹೇಳಿದರು.
ತಾಲೂಕಿನ ಬೆಳಗಲಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮ ಪಂಚಾಯತ ಬೆಳಗಲಿ ತಾಲೂಕು ಪಂಚಾಯತ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮ ಕಾರ್ಯಕ್ರಮದಡಿ ವಿಕಲಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ರಕ್ತ ಹೀನತೆಯು ತೀವ್ರ ಸುಸ್ತು ನಿಶಕ್ತಿ ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗುದಲ್ಲದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರಾಸಕ್ತಿ ಏಕಾಗ್ರತೆ ಉಂಟುಮಾಡುತ್ತದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಸಾರ್ವಜನಿಕರು, ಅಂಗವಿಕಲರು ಸೇರಿದಂತೆ ಪ್ರತಿಯೊಬ್ಬರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದರು.
ಸಕ್ಕರೆ ಖಾಯಿಲೆ, ಅಪೌಷ್ಠಿಕತೆ, ರಕ್ತಹೀನತೆ, ಅಧಿಕ ರಕ್ತದೊತ್ತಡ ಹಾಗೂ ಟಿಬಿ ಖಾಯಿಲೆಯಂತಹ ರೋಗಗಳನ್ನು ವೈದ್ಯರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಸುರಕ್ಷತಾಧಿಕಾರಿ ಸರೋಜಾ ಹಂಪಣ್ಣವರ, ಗ್ರಾ.ಪಂ ಅಧ್ಯಕ್ಷೆ ರತ್ನವ್ವ ವೀ. ಪಾಟೀಲ, ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಾ. ಎಂ.ಐ ಸೂಡಿ, ಡಾ. ಬಸವರಾಜ ಎಚ್.ಎಚ್, ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ಅಯ್ಯನಗೌಡ್ರು, ತಾಲೂಕು ಪಂಚಾಯತ ವಿವಿಧೋದ್ದೇಶ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ, ಆಶಾ ಕಾರ್ಯಕರ್ತೆಯರಾದ ಮಾದೇವಿ ಗೌರಕ್ಕನವರ, ಸವಿತಾ ಕಮಡೊಳ್ಳಿ, ಲಲಿತಾ ಜೀವನಗೌಡ್ರ, ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ಸಿದ್ದನಗೌಡ ಜೀವನಗೌಡ್ರು, ಗ್ರಾ.ಪಂ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ವಿಕಲಚೇತನರು ಉಪಸ್ಥಿತರಿದ್ದರು.