Site icon MOODANA Web Edition

ಕೃಷಿಮೇಳ-2023ರ ಯಶಸ್ಸಿಗೆ ಕಾರಣರಾದ ಮಾಧ್ಯಮದವರಿಗೆ ಅಭಿನಂದನೆ

ಬೆಂಗಳೂರು, ನವೆಂಬರ್ 21 (ಕರ್ನಾಟಕ ವಾರ್ತೆ) :

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ನವೆಂಬರ್ 17 ರಿಂದ 20 ರವರೆಗೆ ನಾಲ್ಕು ದಿನಗಳ ಕಾಲ ‘ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು ಶೀರ್ಷಿಕೆಯಡಿ ನಡೆದ ಕೃಷಿಮೇಳ-2023 ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ಅಭೂತಪೂರ್ವ ಯಶಸ್ಸಿಗೆ ತಾವೆಲ್ಲರೂ ಕಾರಣೀಭೂತರಾಗಿದ್ದೀರಿ. ಪ್ರತಿ ದಿನ ಕೃಷಿಮೇಳದ ಕಾರ್ಯಕ್ರಮಗಳನ್ನು ಮತ್ತು ಆಕರ್ಷಣೆಗಳನ್ನು ತಮ್ಮ ಮಾಧ್ಯಮದ ಮೂಲಕ ನಿರಂತರವಾಗಿ ವರದಿ ಮಾಡಿರುವುದರ ಫಲಶೃತಿ ಈ ಭಾರಿಯ ಕೃಷಿಮೇಳಕ್ಕೆ 15.67 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ವಿಶ್ವವಿದ್ಯಾನಿಲಯದ ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಹಕಾರಿಯಾಯಿತು.

ತಮ್ಮ ಈ ಅವಿರತ ಸೇವೆಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ತಮ್ಮನ್ನು ಮತ್ತು ತಮ್ಮ ಮಾಧ್ಯಮವನ್ನು ಅಭಿನಂದಿಸುತ್ತದೆ. ಕೃಷಿ ವಿಶ್ವವಿದ್ಯಾನಿಲಯದ ಯಾವುದೇ ತಂತ್ರಜ್ಞಾನಗಳನ್ನು ಸಾರ್ವಜನಿಕರಿಗೆ, ಅದರಲ್ಲೂ ಮುಖ್ಯವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ತಾವು ಮತ್ತು ತಮ್ಮ ಮಾಧ್ಯಮವು ಸದಾ ಮುಂಚೂಣಿಯಲ್ಲಿರುತ್ತದೆ. ಅದರಲ್ಲೂ ತಮ್ಮ ವರದಿಗಾರರ ಸೇವೆಯು ತುಂಬಾ ಶ್ಲಾಘನೀಯ. ಮುಂದೆಯೂ ಸಹ ವಿಶ್ವವಿದ್ಯಾನಿಲಯದ ಕಾರ್ಯ ಚಟುವಟಿಕೆಗಳಿಗೆ ಇದೇ ರೀತಿಯ ಸಹಕಾರವನ್ನು ನೀಡುತ್ತಾ ರಾಜ್ಯದಲ್ಲಿ ಕೃಷಿಯ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುತ್ತೀರೆಂದು ಆಶಿಸುತ್ತೇನೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ.ಸುರೇಶ ಅವರು ತಿಳಿಸಿದ್ದಾರೆ.

Exit mobile version