Site icon MOODANA Web Edition

ನ.20 ರಿಂದ 28 ರವರೆಗೆ ಪಶುಪತಿಹಾಳದಲ್ಲಿ ಶ್ರೀ ಸಿದ್ಧಾರೂಢರ ಶಿವನಾಮ ಸಪ್ತಾಹ

ಪಶುಪತಿಹಾಳ ,ತಾ.ಕುಂದಗೋಳ ನವೆಂಬರ್ 18: ಸುಮಾರು ನೂರಕ್ಕೂ ಅಧಿಕ ವರ್ಷಗಳ ಪರಂಪರೆ ಹೊಂದಿರುವ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಶ್ರೀ ಸಿದ್ಧಾರೂಢರ ಮಠದಲ್ಲಿ ಶಿವನಾಮ ಸಪ್ತಾಹ ಇದೇ ನವೆಂಬರ್ 20 ರಿಂದ ಪ್ರಾರಂಭವಾಗಿ 28 ರವರೆಗೆ ಜರುಗಲಿದೆ.

ಸದ್ಗುರು ಸಿದ್ಧಾರೂಢರ ಜೀವಿತ ಕಾಲದಲ್ಲಿ ಅವರ ಅಣತಿಯಂತೆ ಪಶುಪತಿಹಾಳ ಗ್ರಾಮದಲ್ಲಿ ಪ್ರಾರಂಭವಾದ “ಓಂ ನಮಃ ಶಿವಾಯ” ಅಖಂಡ ಶಿವನಾಮ ಸ್ಮರಣೆ ಸಪ್ತಾಹವು ಈ ಬಾರಿಯೂ ನವೆಂಬರ್ 20 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಗೌರಿಹುಣ್ಣಿಮೆಯವರೆಗೆ ಜರುಗಲಿದೆ.ನ.27 ರಂದು ಸಂಜೆ ಶ್ರೀಸಿದ್ಧಾರೂಢರು ಹಾಗೂ ಶ್ರೀ ಗುರುನಾಥರೂಢರ ತಾತ್ವಿಕ ತೇರಿನ ಉತ್ಸವದೊಂದಿಗೆ ಸಮಾರೋಪಗೊಳ್ಳಲಿದೆ.

ಬಾಗಲಕೋಟ ಜಿಲ್ಲಾ ಅರಕೇರಿಯ ಕೌದೇಶ್ವರ ಸಾಧು ಸಂಸ್ಥಾನ ಮಠದ ಶ್ರೀ ಮಾಧವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಿಜಗುಣ ಶಿವಯೋಗಿಗಳ ಕೈವಲ್ಯ ಜ್ಞಾನಪದ್ಧತಿಯ ಜ್ಞಾನ ಪ್ರತಿಪಾದನಾ ಸ್ಥಲದ ಬ್ರಹ್ಮ ಜಿಜ್ಞಾಸೆಯು ಪ್ರತಿದಿನ ಮುಂಜಾನೆ ಹಾಗೂ ಸಂಜೆಯ ಅವಧಿಯಲ್ಲಿ ನಡೆಯಲಿದೆ.

ಹುಬ್ಬಳ್ಳಿ ಜಡಿಮಠ ಹಾಗೂ ಸುಳ್ಳ ಗ್ರಾಮದ ಶ್ರೀಸಿದ್ಧಾರೂಢ ಮಠದ ರಾಮಾನಂದ ಮಹಾಸ್ವಾಮಿಗಳು,ಹುಬ್ಬಳ್ಳಿ ನಾಸಿಕ ಶರಣಪ್ಪನ ಮಠದ ಶ್ರೀ ಬಸವಾನಂದ ಮಹಾಸ್ವಾಮಿಗಳು,ತಾವರಗೆರೆ ಮತ್ತು ಸಂಶಿ ಸಿದ್ಧಾರೂಢ ಮಠದ ಶ್ರೀ ನಿರ್ಗುಣಾನಂದ ಸ್ವಾಮಿಗಳು,ಬೈಲಹೊಂಗಲ ತಾಲೂಕು ನೇಗಿನಹಾಳದ ಶ್ರೀಅದ್ವೈತಾನಂದ ಭಾರತಿ ಸ್ವಾಮಿಗಳು,ಯಾದವಾಡ-ಮುಳಮುತ್ತಲದ ಶ್ರೀ ಆನಂದ ಮಹಾಸ್ವಾಮಿಗಳು,ಹನುಮನಹಳ್ಳಿಯ ಶ್ರೀಶಿವಬಸವ ಸ್ವಾಮಿಗಳು ,ಸವದತ್ತಿ ತಾಲ್ಲೂಕು ಕರಿಕಟ್ಟಿಯ ವೇ.ಮೂ.ಕುಮಾರಶಾಸ್ತ್ರಿಗಳು ಸೇರಿದಂತೆ ಅನೇಕ ಸಾಧು-ಸಂತರಿಂದ ಪ್ರತಿನಿತ್ಯ ಸಂಜೆ ಪ್ರವಚನ, ಕೀರ್ತನೆಗಳು ನಡೆಯಲಿವೆ.

ನಿರಂತರವಾಗಿ ದಿನದ 24 ಗಂಟೆಗಳ ಕಾಲವೂ ಏಕತಾರಿಯನ್ನು ನೆಲಕ್ಕೆ ಸ್ಪರ್ಶಿಸದೇ , ಭಕ್ತರು ಸರದಿಯಂತೆ ಹೊತ್ತುಕೊಂಡು ಸತತ ಏಳು ದಿನಗಳ ಅಖಂಡ ಶಿವನಾಮ ಸ್ಮರಣೆ ನಡೆಸುವುದು ಇಲ್ಲಿನ ವಿಶೇಷವಾಗಿದೆ.ಅಕ್ಕನ ಬಳಗದ ಮಹಿಳಾ ಸದಸ್ಯರಿಂದ ಭಜನೆ ,ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ನಿರಂತರ ಏಳು ದಿನಗಳ ಕಾಲ ಅನ್ನ ದಾಸೋಹ ಜರುಗಲಿದೆ ಎಂದು ಪಶುಪತಿಹಾಳ ಶ್ರೀಸಿದ್ಧಾರೂಢ ಮಠದ ಪ್ರಕಟಣೆ ತಿಳಿಸಿದೆ.

Exit mobile version