ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.9: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯಡಿಯಲ್ಲಿ, ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ 09 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ. ಜನ ಸಾಮಾನ್ಯರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.
ಇಂದು ವಕೀಲರ ಸಂಘದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾತು ಬಲ್ಲವನಿಗೆ ಜಗಳವಿಲ್ಲ, ಕಾನೂನು ಬಲ್ಲವನಿಗೆ ವ್ಯಾಜ್ಯವಿಲ್ಲ ಎಂಬ ಮಾತಿನಂತೆ ಕಾರ್ಯನಿರ್ವಹಿಸಬೇಕು. ಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಜನರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರೆ ಅಪರಾಧ ಪ್ರಮಾಣ ಕಡಿಮೆಯಾಗುತ್ತದೆ. ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರೆಯಬೇಕು. ಡಿಸೆಂಬರ್ 9 ರಂದು ನಡೆಯುವ ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥ ಪಡಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ನುಡಿದರು.
5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಣ್ಣ ಬಿ. ಹಂದ್ರಾಳ ಮಾತನಾಡಿ, ಸರ್ವರಿಗೂ ಸಮಪಾಲು ಸರ್ವರಿಗೂ ಬಾಳು ಎಂಬ ಉದ್ದೇಶದಡಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು. ಬಡವರಿಗೆ, ಮಕ್ಕಳಿಗೆ ಕಾನೂನು ನೆರವು ದೊರೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ. ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವುದು, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸಣ್ಣ ಪುಟ್ಟ ವ್ಯಾಜ್ಯಗಳನ್ನು ಕಾನೂನು ನೆರವು ಕೇಂದ್ರದಿಂದ ಪರಿಹರಿಸಿಕೊಳ್ಳಬಹುದು. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ನಾವೆಲ್ಲರೂ ಮುಂದಾಗಬೇಕು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ಎಮ್.ಎಸ್. ಬಾಣದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಎಲ್ಲರಿಗೂ ನ್ಯಾಯ ದೊರೆಯುತ್ತಿದೆ. ಕಾನೂನು ಸೇವೆಗಳ ಪ್ರಾಧಿಕಾರದಿಂದ ಜನರಿಗೆ ಕಾನೂನು ನೆರವು ಸಿಗುತ್ತಿದೆ. ವ್ಯಕ್ತಿಯು ತನ್ನ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗಲಿದೆ. ಸಮಾಜವನ್ನು ಪರಿವರ್ತಿಸಲು ಕಾರ್ಯೋನ್ಮುಖರಾಗಬೇಕು. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮುಂದಾಗಬೇಕಿದೆ ಎಂದು ತಿಳಿಸಿದರು.
ಪ್ರಧಾನ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಇಂದಿರಾ ಎಮ್. ಚೆಟ್ಟಿಯಾರ್, ಔದ್ಯಮಿಕ ನ್ಯಾಯಾಧೀಕರಣದ ಅಧ್ಯಕ್ಷಾಧಿಕಾರಿಗಳು ಹಾಗೂ ಜಿಲ್ಲಾ ನ್ಯಾಯಾಧೀಶರಾದ ವಿ. ಜಗದೀಶ, 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಡಿ. ಆರಿ ಸೇರಿದಂತೆ ತಾಲೂಕು ಕಾನೂನು ಸೇವಾ ಸಮಿತಿಯ ಪದಾಧಿಕಾರಿಗಳು, ವಕೀಲರ ಸಂಘದ ಸದಸ್ಯರು, ವಕೀಲರು, ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
ವಕೀಲರಾದ ಭಾಗ್ಯಶ್ರೀ ಅರಬಟ್ಟಿ ಪ್ರಾರ್ಥಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಚೆನ್ನಣ್ಣವರ್ ಆರ್.ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ನಿರೂಪಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಶಿಗ್ಗಾಂವಿ ಅವರು ವಂದಿಸಿದರು.
