Site icon MOODANA Web Edition

ಆಯುರ್ವೇದ ಚಿಕಿತ್ಸೆಯ ಜೊತೆಗೆ ವೈಜ್ಞಾನಿಕ ಸಂಶೋಧನೆಗಳ ಅಧ್ಯಯನ ಮಾಡಬೇಕು – ಸಚಿವ ದಿನೇಶ್ ಗುಂಡೂರಾವ್

ayurveda, ayurveda herbs, beauty-3408425.jpg

ಬೆಂಗಳೂರು, ನವೆಂಬರ್ 8 (ಕರ್ನಾಟಕ ವಾರ್ತೆ):

ಆಯುರ್ವೇದ ಚಿಕಿತ್ಸೆಯ ಜೊತೆಗೆ ವೈಜ್ಞಾನಿಕ ಸಂಶೋಧನೆ, ಹೊಸ ಚಿಂತನೆ, ಪ್ರಯೋಗಗಳ ಅಧ್ಯಯನವನ್ನು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಆಯುಷ್ ಇಲಾಖೆ ವತಿಯಿಂದ ಧನ್ವಂತರಿ ಜಯಂತಿ ಹಾಗೂ 8ನೇ ಆಯುರ್ವೇದ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ, ಪ್ರಸ್ತುತ ವೈದ್ಯಕೀಯ ಸನ್ನಿವೇಶದಲ್ಲಿ ಆಯುರ್ವೇದ ಮಹತ್ವ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು  ಆಯುರ್ವೇದವು ಪುರಾತನವಾದ ವೈದ್ಯಕೀಯ ವಿಜ್ಞಾನವಾಗಿದೆ. ಆಯುರ್ವೇದವು ಆರೋಗ್ಯಕ್ಕೆ ಪ್ರಾಶಸ್ತ್ಯವನ್ನು ನೀಡುತ್ತದೆ. ರೋಗದ ನಿವಾರಣೆಯ ಜೊತೆಗೆ ಆರೋಗ್ಯವನ್ನು ಹತೋಟಿಯಲ್ಲಿಡುವ ಬಗ್ಗೆ  ಜೀವನಶೈಲಿಯನ್ನು ತಿಳಿಸುತ್ತದೆ.  ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬೇಕು.  ಸಮಾಜದಲ್ಲಿ ಜನರ ಜೀವನಶೈಲಿ, ಆಹಾರದ ಪದ್ಧತಿ, ಮಾನಸಿಕ ಒತ್ತಡಗಳು, ದೇಹದ ಮೇಲೆ ಪರಿಣಾಮ ಬೀರಿ ರೋಗಗಳು ವೃದ್ಧಿಸುತ್ತವೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದ ಹಾಗೆ ನೋಡಿ ಕೊಳ್ಳುವುದು ಆಯುರ್ವೇದದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಜನರಿಗೆ ರೋಗ ಬರುವ ಪೂರ್ವದಲ್ಲಿಯೆ ಅದರ ಕುರಿತು ಜಾಗೃತಿ, ತಿಳುವಳಿಕೆ, ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಬೇಕು. ಗುಣಮಟ್ಟದ ಚಿಕಿತ್ಸೆಯ ಕುರಿತು ಮಾರ್ಗಸೂಚಿಯ ಅವಶ್ಯಕತೆ ಇದೆ ಎಂದರು.

ಆಯುರ್ವೇದದ ಭಾಗಗಳಾದ ಜೀವನಶೈಲಿ, ಆಹಾರ ಸ್ವೀಕಾರÀ, ಮುಂತಾದವುಗಳ ಕುರಿತು ಜನರಿಗೆ ತಿಳುವಳಿಕೆ ನೀಡುವ ಅವಶ್ಯಕತೆ ಇದೆ. ಜನರಿಗೆ ವೈಜ್ಞಾನಿಕವಾಗಿ ಚಿಕಿತ್ಸೆಯ ಪರಿಣಾಮವನ್ನು ತಿಳಿಸಿದಾಗ ಅವರಲ್ಲಿ ಆತ್ಮವಿಶ್ವಾಸ ಮೂಡತ್ತದೆ. ಅನೇಕ ಜನರಿಗೆ ಚಿಕಿತ್ಸೆ ಹಾಗೂ ಚಿಕಿತ್ಸೆಯ ಪರಿಣಾಮವು ತಿಳಿಯುತ್ತದೆ.  

ಆಯುರ್ವೇದದ ಜೊತೆಗೆ ವೈಜ್ಞಾನಿಕ ಸಂಶೋಧನೆ, ಹೊಸ ಪದ್ಧತಿಯನ್ನು ಅಳವಡಿಸಿ ಆಯುರ್ವೇದದಲ್ಲಿ ಅಳವಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಆಯುರ್ವೇದ ಕಾಲೇಜು, ಆಸ್ಪತ್ರೆ, ಸಂಶೋಧನೆಗೆ ಒತ್ತು ನೀಡಬೇಕು. ಆಯುರ್ವೇದಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ವಿಚಾರ ಸಂಕೀರ್ಣದ ಮೂಲಕ ಆಯುರ್ವೇದ ಹೊಸ ಬೆಳವಣಿಗೆಯ ಪ್ರಯತ್ನಕ್ಕೆ ಇಲಾಖೆ ವತಿಯಿಂದ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ  ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ  ವಿಶ್ರಾಂತ ಮುಖ್ಯ ವೈದ್ಯಾಧಿಕಾರಿ ಡಾ. ಬಿ. ಗುರುಬಸವರಾಜ್, ಅಂತರಾಷ್ಟ್ರೀಯ ಆಯುರ್ವೇದ ಉಪನ್ಯಾಸಕರಾದ  ಡಾ. ಲತಾ ದಾಮ್ಲೆ, ಪ್ರೇರಣಾ ಉಪನ್ಯಾಸಕರು ರಘು ಬಿ. ಎಸ್, ಆಯುಷ್ ಇಲಾಖೆಯ ಉಪನಿರ್ದೇಶಕರಾದ ಡಾ. ಅನುರಾಧ ಚಂಚಲಕರ, ಮುಖ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version