ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.7: ತಾಲೂಕಾಡಳಿತದ ವತಿಯಿಂದ ನವೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ವೀರರಾಣಿ ಒನಕೆ ಒಬವ್ವ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರರಾದ ಪ್ರಕಾಶ ನಾಶಿ ಹೇಳಿದರು.
ಇಂದು ಹುಬ್ಬಳ್ಳಿ ತಹಸೀಲ್ದಾರ ಕಾರ್ಯಾಲಯದಲ್ಲಿ ಜಯಂತಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಯು ಒಬವ್ವನ ಪರಾಕ್ರಮ ಹಾಗೂ ಸಾಹಸ ಕಥೆಯನ್ನು ಅರಿಯುವುದು ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ತಾಲೂಕಾಡಳಿತ ವತಿಯಿಂದ ನವೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಾಡಳಿತ ಸೌಧದಲ್ಲಿ ವೀರರಾಣಿ ಒನಕೆ ಒಬವ್ವ ಜಯಂತಿ ಆಚರಿಸಲಾಗುತ್ತಿದ್ದು, ಜಯಂತಿಯಂದು ವೀರರಾಣಿ ಒಬವ್ವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ವೀರ ವನಿತೆ ಒಬವ್ವಳ ಚರಿತ್ರೆ ಕುರಿತು ಉಪನ್ಯಾಸ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸಭೆಯಲ್ಲಿ ಹುಬ್ಬಳ್ಳಿ ನಗರ ತಹಸೀಲ್ದಾರರಾದ ಕಲಗೌಡ ಪಾಟೀಲ, ಸಮಾಜದ ಮುಖಂಡರಾದ ರಮೇಶ ನಾಗಣ್ಣವರ, ಇಂದುಮತಿ ಶಿಗ್ಗಾಂವಿ, ಶಂಕರ ಅಜಮನಿ, ಚಂದ್ರಶೇಖರ ಯಾತಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.