21.1 C
Karnataka
Thursday, September 4, 2025
spot_img

ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಅಕ್ಟೋಬರ್ 27, (ಕರ್ನಾಟಕ ವಾರ್ತೆ) :

ಇಡೀ ಜಗತ್ತಿಗೆ ರಾಮಾಯಣದಂತಹ ಮಹೋನ್ನತ ಮಹಾಕಾವ್ಯವನ್ನು ಕೊಡುಗೆ ನೀಡಿದ ದಾರ್ಶನಿಕರು, ಸಂವಿಧಾನದ ಮೂಲ ಆಶಯವಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸರ್ವಧರ್ಮ ಸಮನ್ವಯ ತತ್ವವನ್ನು ಅಂದೇ ಜನಮಾನಸದಲ್ಲಿ ಬಿತ್ತಿದ ಶ್ರೀ ಮಹರ್ಷಿ ವಾಲ್ಮೀಕಿ ಯವರ 2023 ನೇ ಸಾಲಿನ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸೀಗೆ ಹುಣ್ಣಿಮೆ ದಿನವಾದ ಅಕ್ಟೋಬರ್ 28 ರಂದು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ.

ರಾಜ್ಯಮಟ್ಟದ ಶ್ರೀ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಅಕ್ಟೋಬರ್ 28 ರಂದು ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ರಾಜನಹಳ್ಳಿಯ ಶ್ರೀ ಮಹರ್ಷಿ ಗುರುಪೀಠದ ಜಗದ್ಗುರುಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿ ಅವರು ದಿವ್ಯ ಸಾನಿಧ್ಯದೊಂದಿಗೆ ಶಾಸಕರಾದ ರಿಜ್ವಾನ್ ಹರ್ಷದ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಬಸವಗುಡಿಯಿಂದ ವಾಲ್ಮೀಕಿ ಜ್ಯೋತಿಯೊಂದಿಗೆ ಸಮುದಾಯದ ಮಹನೀಯರ ಕುರಿತ ಸ್ತಬ್ಧ ಚಿತ್ರಗಳ ಮೆರವಣಿಗೆ ಬೈಕ್ ರ್ಯಾಲಿ ನಡೆಯಲಿವೆ. ಶ್ರೀ ಬಸವೇಶ್ವರ ವೃತ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಸಾರೋಟ್‍ದೊಂದಿಗೆ ವಿವಿಧ ಬುಡಕಟ್ಟು ಕಲಾ ತಂಡಗಳ ಪ್ರದರ್ಶನ ನಡೆಯಲಿದೆ.  
     
ಸಾಹಿತ್ಯ, ಶೈಕ್ಷಣಿಕ, ಕಲೆ, ಸಾಮಾಜಿಕ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮುದಾಯದ ಸಾಧಕರನ್ನು ಗುರುತಿಸಿ 2023ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲು ಬಿ. ಶಿವಪ್ಪ ಭಾ.ಆ.ಸೇ(ನಿ) ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಎಲ್ಲಾ ಜಿಲ್ಲೆಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಕೆಯಾದ ಅರ್ಜಿಗಳು ಹಾಗೂ ಅರ್ಜಿ ಸಲ್ಲಿಸದೇ ಇರುವ ಸಾಧಕರ ಬಗ್ಗೆ ಸಹ ಸಮಿತಿಯು ಸುಧೀರ್ಘವಾಗಿ ಚರ್ಚಿಸಿ, ವಿವಿಧ ಕ್ಷೇತ್ರಗಳಿಂದ ಸಲ್ಲಿಕೆಯಾಗಿದ್ದ ಒಟ್ಟು 113 ಅರ್ಜಿಗಳು ಪರಿಶೀಲಿಸಿ ಅಂತಿಮವಾಗಿ ನ್ಯಾಯಾಂಗ ಕ್ಷೇತ್ರದಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವೈ. ಹನುಮಂತಪ್ಪ, ಧಾರ್ಮಿಕ ಕ್ಷೇತ್ರದಿಂದ ಶ್ರೀಮತಿ ಮಹಾದೇವಮ್ಮ ಕೋಂ. ರಂಗಸ್ವಾಮಿ, ಶಿಕ್ಷಣ ಕ್ಷೇತ್ರದಿಂದ ರಾಮಣ್ಣ ಮಹಾದೇವ ಗಸ್ತಿ, ಸಮಾಜ ಸೇವೆ ಕ್ಷೇತ್ರದಿಂದ      ಜಿ.ಓ. ಮಹಾಂತಪ್ಪ, ಸಾಮಾಜಿಕ ಸಂಘಟನೆ ಕ್ಷೇತ್ರದಿಂದ ಸೋಮಣ್ಣ, ವೈದ್ಯಕೀಯ ಕ್ಷೇತ್ರದಿಂದ ಶ್ರೀಮತಿ ಶಾರದ ಪ್ರಭು ಹುಲಿ ನಾಯಕ, ಸಾಹಿತ್ಯ ಕ್ಷೇತ್ರದಿಂದ ಶ್ರೀಮತಿ ಸುಕನ್ಯಾ ಮಾರುತಿ ಮತ್ತು ರಂಗಭೂಮಿ ಕ್ಷೇತ್ರದಿಂದ ಶ್ರೀಮತಿ ಸುಜಾತಮ್ಮ ಇವರನ್ನು 2023ನೇ ಸಾಲಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶ್ರೀಯುತರುಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.


ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಪ್ರತಿ ಸಾಧಕರಿಗೆ ಐದು ಲಕ್ಷ ರೂ. ನಗದು, 20 ಗ್ರಾಂ ಚಿನ್ನದ ಪದಕ ನೀಡಿ, ಗೌರವಿಸಲಾಗುವುದು.

ಹೈಕೋರ್ಟ್‍ನ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಎನ್.ವೈ, ಹನುಮಂತಪ್ಪ:

ಶ್ರೀಯುತರು ದಿನಾಂಕ 25.09.1939 ರಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಬಳ್ಳಾರಿಯಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನ ಎಸ್.ಜೆ.ಆರ್.ಸಿ. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ, ಆಂಧ್ರಪುದೇಶದ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿ ಗುರುತರವಾಗಿ ಸೇವೆಸಲ್ಲಿಸಿದ್ದಾರೆ. ಶ್ರೀಯುತರು ಒರಿಸ್ಸಾ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಅನುಪಮ ಸಲ್ಲಿಸಿದ್ದಾರೆ. ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ.

ಶ್ರೀಮತಿ ಮಹಾದೇವಮ್ಮ ಕೋಂ. ರಂಗಸ್ವಾಮಿ:

ಶ್ರೀಯುತರು ರಾಜನಹಳ್ಳಿ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಶ್ರೀ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮಿಜಿಯವರ ಮಾತೃಶ್ರೀಯವರಾಗಿದ್ದು, ಧಾರ್ಮಿಕ ಕ್ಷೇತ್ರಕ್ಕೆ, ತಮ್ಮ ಪುತ್ರರತ್ನ ಶ್ರೀ ಶ್ರೀ ಶ್ರೀ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮಿಜಿಯವರನ್ನು ತ್ಯಾಗ ಮಾಡಿದ್ದು, ಧಾರ್ಮಿಕ ಕ್ಷೇತ್ರಕ್ಕೆ ಅಪರಿಮಿತ ಸೇವೆ ಹಾಗೂ ಸಮಾಜದ ಸಂಘಟನೆಗೆ ಮಹತ್ತರ ಪಾತ್ರವಹಿಸಿದ್ದಾರೆ.

ರಾಮಣ್ಣ ಮಹಾದೇವ ಗಸ್ತಿ :
ಶ್ರೀಯುತರು ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿದ್ದಾರೆ. ಶಿಕ್ಷಣ ಕೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಜಿ.ಓ. ಮಹಾಂತಪ್ಪ :
ಶ್ರೀಯುತರು ಹಾಸನ ಜಿಲ್ಲೆಯವರಾಗಿದ್ದು, ಸುಮಾರು 32 ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಕೆಲಸ ಮಾಡಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಸತತ 35 ವರ್ಷಗಳಿಂದ ವಾಲ್ಮೀಕಿ ಸಮುದಾಯದ ನಾಯಕ ಸಂಘದ ಜಿಲ್ಲಾಧ್ಯಕ್ಷರಾಗಿ ಸಮುದಾಯದ ಏಳಿಗೆಗಾಗಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.

ಸೋಮಣ್ಣ:
ಶ್ರೀಯುತರು ಮೈಸೂರು ಜಿಲ್ಲೆಯವರಾಗಿದ್ದು, ಜೇನುಕುರಬ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಗಿರಿಜನರ ಕಲ್ಯಾಣಕ್ಕಾಗಿ ಹಾಗೂ ಸಮುದಾಯದ ಸಂಘಟನೆಗಾಗಿ ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀಮತಿ ಶಾರದ ಪ್ರಭು ಹುಲಿ ನಾಯಕ:
ಶ್ರೀಯುತರು ರಾಯಚೂರು ಜಿಲ್ಲೆಯವರಾಗಿದ್ದು, ಸ್ತ್ರೀರೋಗ ತಜ್ಞ ವೈದ್ಯರಾಗಿದ್ದು, ಬುಡಕಟ್ಟು, ಸಮುದಾಯದ ಶ್ರೇಯೋಭಿವೃದ್ಧಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖ್ಯಾತ ವೈದ್ಯರಾಗಿದ್ದು, ಮಹಿಳೆಯರ ಆರ್ಥಿಕ ಸದೃಢತೆಗಾಗಿ ಸರ್ಕಾರದ ಯೋಜನಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಿದ್ದಾರೆ. ಮಹಿಳಾ ಸಹಾಯ ಸಂಘಗಳನ್ನು ಸ್ಥಾಪನೆ ಮಾಡಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ.

ಶ್ರೀಮತಿ ಸುಕನ್ಯಾ ಮಾರುತಿ:
ಶ್ರೀಯುತರು ವಿಜಯನಗರ ಜಿಲ್ಲೆಯವರಾಗಿದ್ದು, ಕವಿಯತ್ರಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, 5 ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಸಮಾಜವನ್ನು ಸಂಘಟಿಸಲು ಅಪಾರವಾಗಿ ಶ್ರಮಿಸಿದ್ದಾರೆ.

ಶ್ರೀಮತಿ ಸುಜಾತಮ್ಮ:
ಶ್ರೀಯುತರು ಬಳ್ಳಾರಿ ಜಿಲ್ಲೆಯವರಾಗಿದ್ದು, ಬಯಲಾಟ ಪ್ರದರ್ಶನಗಳನ್ನು ನೀಡುತ್ತಾ ಹಲವಾರು ಮೈಲಿಗಲ್ಲು ಸಾಧನೆ ಮಾಡಿದ್ದಾರೆ. 2008 ರಲ್ಲಿ ಕಿತ್ತೂರು ರಾಣಿ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸುಮಾರು ಐದು ಸಾವಿರ  ಬಯಲಾಟ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!