ಬೆಂಗಳೂರು, ಅಕ್ಟೋಬರ್ 09 (ಕರ್ನಾಟಕ ವಾರ್ತೆ) :
ರಾಷ್ಟ್ರೀಯ ಅಂಚೆ ಸಪ್ತಾಹ 2023-24ನ್ನು ಇಂದಿನಿಂದ ಅಕ್ಟೋಬರ್ 13ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ರಾಷ್ಟ್ರಮಟ್ಟದ ಮೇಘದೂತ್ ಪ್ರಶಸ್ತಿಯನ್ನು ಬೆಂಗಳೂರು ಜಿ.ಪಿ.ಓ ಸೂಪರ್‍ವೈಸರ್ ಎಸ್. ರಮೇಶ್‍ಬಾಬು ಹಾಗೂ ಕರ್ನಾಟಕ ಪೊಸ್ಟಲ್ ಸರ್ಕಲ್ ಮೈಸೂರು ಕಚೇರಿಯ ಸಹಾಯಕ ಅಧೀಕ್ಷರಾದ ವಿನಾಯಕಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಬೆಂಗಳೂರು ಜಿ.ಪಿ.ಓ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮೇಘದೂತ ಪ್ರಶಸ್ತಿ ಸೇರಿದಂತೆ ಇತರೆ ಅಂಚೆ ಸೇವೆಗಳ ಸಂಬಂಧಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಂಚೆ ಕಚೇರಿಯು ಸಾರಿಗೆ ಇಲಾಖೆ, ಕರ್ನಾಟಕ ಚುನಾವಣಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧೀಕಾರ, ಕಾಫಿ ಮಂಡಳಿಗಳಿಂದ ಅನೇಕ ಒಪ್ಪಂದ ಮಾಡಿಕೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಬಾಲಕಿಯರ ಏಳಿಗೆಗಾಗಿ ಸುಕನ್ಯ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಇತ್ತೀಚೆಗೆ ಮಹಿಳಾ ಸನ್ಮಾನ್ (ಉಳಿತಾಯ ಯೋಜನೆ) ಪತ್ರಗಳನ್ನು ಸಹ ಜಾರಿಗೊಳಿಸಲಾಗಿದೆ. ಸಾಮಾಜಿಕ ಜಾಗೃತಿ ವಿಷಯಗಳನ್ನು ಒಳಗೊಂಡ ವಿಭಿನ್ನ ಕಾರ್ಯಕ್ರಮಗಳನ್ನು ಅಂಚೆ ಕಚೇರಿ ಆಯೋಜಿಸಿದೆ. ವಿಭಿನ್ನ ವ್ಯಕ್ತಿತ್ವವುಳ್ಳ ವ್ಯಕ್ತಿಗಳ 25 ವಿಶೇಷ ಲಕೋಟೆ, 24 ವಿಶೇಷ ರದ್ದತಿ ಮತ್ತು ಕೆ.ಎ.ಎಸ್ ಅಧಿಕಾರಿಗಳ ಸಂಘದ ಕಾರ್ಪೊರೇಟ್ ಮೈ ಸ್ಟಾಂಪ್‍ನ್ನು ಬಿಡುಗಡೆ ಮಾಡಲಾಗಿದೆ. ಯಶಸ್ವಿ ಚಂದ್ರಯಾನ – 3ರ ಸ್ಮರಣಾರ್ಥ ವಿಶೇಷ ರದ್ದತಿಯೊಂದಿಗೆ ಕಳೆದ ಆಗಸ್ಟ್ 23 ರಂದು ವಿಶೇಷ ಲಕೋಟೆ ಬಿಡುಗಡೆ ಮಾಡಲಾಗಿದೆ.
ಈ ರಾಷ್ಟ್ರೀಯ ಅಂಚೆ ಸಪ್ತಾಹ ಅಂಗವಾಗಿ ಪೊಸ್ಟ್ ಕಾರ್ಡುಗಳ ಪ್ರದರ್ಶನ, ರಸಪ್ರಶ್ನೆ, ಶಾಲೆಗಳಲ್ಲಿ ಪತ್ರ ಬರೆಯುವ ಸ್ಪರ್ಧೆ, ಅಂಚೆ ಸಂಗ್ರಹಕರಿಗೆ ವಿಚಾರ ಸಂಕಿರಣ, ಡಿಜಿಟಲ್ ಪಾವತಿಯಲ್ಲಿ ಅನುಸರಿಸಬೇಕಾದ ಸುರಕ್ಷಾ ಕ್ರಮಗಳ ಅನ್‍ಲೈನ್ ವಂಚನೆಗಳ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರ್ಥಿಕ ಸಾಕ್ಷರತಾ ಅಭಿಯಾನ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆಗೆ “ಮೇರಿ ಮಿಟ್ಟಿ ಮೇರಿ ದೇಶ್” ಅಭಿಯಾನ ಸಹ ದೇಶದ್ಯಾಂತ ಹಮ್ಮಿಕೊಳ್ಳಲಾಗಿದ್ದು, ಮನೆ ಮನೆಯಿಂದ ಮಣ್ಣನ್ನು ತಂದು ಒಗ್ಗೂಡಿಸಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶಕ್ಕೆ ತಮ್ಮ ಪ್ರಾಣ ತೆತ್ತ ಸ್ವಾತಂತ್ರ ಯೋಧರ ಸ್ಮರಣಾರ್ಥ ಇದನ್ನು ಆಯೋಜಿಸಲಾಗಿದೆ. ಅಲ್ಲದೆ ಫಿಟ್ ಇಂಡಿಯಾ ಅಭಿಯಾನ ಹಾಗೂ ಸ್ವಚ್ಛತಾ ಸೇವಾ ಅಭಿಯಾನಕ್ಕೂ ಸಹ ಅಂಚೆ ಇಲಾಖೆ ಕೈಜೋಡಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್, ಜನರಲ್ ಮ್ಯಾನೇಜರ್ ಜೂಲಿಯಾ ಮಹಾಪಾತ್ರ, ಉತ್ತರ ಕರ್ನಾಟಕ ಪ್ರದೇಶದ ಜನರಲ್ ಪೋಸ್ಟ್ ಮಾಸ್ಟರ್ ಸುಶೀಲ್ ಕುಮಾರ್, ಬೆಂಗಳೂರು ಕೇಂದ್ರ ಕಚೇರಿ ಪೋಸ್ಟ್ ಮಾಸ್ಟರ್ ಜನರಲ್ ಎಲ್. ಕೆ. ದಾಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.