ನವಲಗುಂದ, ಅ.05:* ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದಲ್ಲಿ ಉಜ್ಜಯಿನಿ ಸಧರ್ಮ ಪೀಠದ ಪ್ರಸ್ತುತ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾರೋಹಣದ 12 ನೇ ವರ್ಷದ ಸವಿನೆನಪಿಗಾಗಿ ಸ್ಥಾಪಿಸಿರುವ ನಿರಂತರ ದತ್ತಿ ಉಪನ್ಯಾಸವು ಪ್ರತಿ ವರ್ಷ ನವಲಗುಂದ ತಾಲ್ಲೂಕಿನಲ್ಲಿ ನಡೆಯಲಿದ್ದು, ಅದರ ಪ್ರಥಮ ಉದ್ಘಾಟನೆ ಕಾರ್ಯಕ್ರಮವನ್ನು ಬರುವ ನವೆಂಬರ್ 19 ರಂದು ನವಲಗುಂದ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಎಲ್ಲ ಸಾಹಿತಿಗಳು, ಭಕ್ತರು, ಸಾರ್ವಜನಿಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಪಂಚಗ್ರಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.
ಅವರು ಇಂದು ಸಂಜೆ ನವಲಗುಂದ ಪಂಚಗ್ರಹ ಹಿರೇಮಠದಲ್ಲಿ ಜರುಗಿದ ಜಗದ್ಗುರು ಮಹಾಸನ್ನಿಧಿಯವರ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ, ಮಾತನಾಡಿದರು.
ಕನ್ನಡ ಸಾಹಿತ್ಯ, ಸಂಸ್ಕøತಿ, ಸಂಸ್ಕಾರಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಶಿಕ್ಷಣ, ಧಾರ್ಮಿಕ ಕ್ಷೇತ್ರಗಳನ್ನು ವೀರಶೈವ ಪಂಚಪೀಠಗಳು ಪೋಷಿಸಿ, ಬೆಳೆಸಿವೆ ಎಂದರು. ಸಮಾಜದಲ್ಲಿ ಎಲ್ಲ ಸಮಾಜವನ್ನು ಒಗ್ಗೂಡಿಸಬೇಕು. ಬಲಾಡ್ಯ ಸಮಾಜ ನಿರ್ಮಾಣವಾಗಬೇಕು ಎಂದರು.
ಜಗದ್ಗುರು ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯಿನಿ ಸದ್ಧರ್ಮ ಪೀಠವು, ಸಮಾಜಕ್ಕೆ ಸನ್ಮಾರ್ಗ ತೋರಿ, ಸಮಾಜದಲ್ಲಿ ಸಂಸ್ಕಾರ, ಸಂಸ್ಕøತಿ ಬೆಳೆಸಲು ಸದಾ ಶ್ರಮಿಸಿದ ಶ್ರೀ ಪೀಠ. ಪ್ರಸ್ತುತ ಜಗದ್ಗುರುಗಳು ಕನ್ನಡ, ಸಂಸ್ಕøತ, ಹಿಂದಿ, ಇಂಗ್ಲಿಷ್, ತೆಲುಗು, ಮರಾಠಿ ಭಾಷೆಗಳಲ್ಲಿ ಪಂಡಿತರು. ರಾಜ್ಯ, ಹೊರರಾಜ್ಯಗಳಲ್ಲಿ ಸದಾ ಧರ್ಮ ಜಾಗೃತಿಗಾಗಿ ಸಂಚರಿಸುವ ಶ್ರೀಗಳು ವೀರಶೈವ ಲಿಂಗಾಯತರು ಸೇರಿ ಸರ್ವ ಸಮಾಜ ಶಾಂತಿ, ಸಹಬಾಳ್ವೆ, ಅನ್ಯೋನ್ಯತೆಯಿಂದ ಬಾಳಲು ಧರ್ಮ ಸಂದೇಶ ನೀಡುತ್ತಿದ್ದಾರೆ.
ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಸ್ತುತ ಜಗದ್ಗುರುಗಳ ಹೆಸರಿನಲ್ಲಿ ಸ್ಥಾಪಿಸಿರುವ ನಿರಂತರ ದತ್ತಿ ಉಪನ್ಯಾಸ ಕಾರ್ಯಕ್ರಮವು ಪ್ರತಿ ವರ್ಷ ನವಲಗುಂದ ತಾಲ್ಲೂಕಿನಲ್ಲಿ ಕಸಾಪ ಘಟಕದಿಂದ ನಡೆಯಲಿರುವುದು ಸಂತೋಷ ಎಂದು ಅವರು ಹೇಳಿದರು.
ಬರುವ ನವ್ಹೆಂಬರ್ 19 ರ ರವಿವಾರದಂದು ಉಜ್ಜಯಿನಿ ಜಗದ್ಗುರುಗಳ ಅಮೃತ ಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಅವರ ದಿವ್ಯ ಸಾನಿಧ್ಯದಲ್ಲಿ ಧರ್ಮಜಾಗೃತಿ ಸಭೆ ಜರುಗಲಿದೆ ಎಂದು ಸಿದ್ಧೇಶ್ವರ ಶಿವಾಚಾರ್ಯರು ತಿಳಿಸಿದರು.
ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಡಾ.ಸುರೇಶ ಹಿರೇಮಠ ಮಾತನಾಡಿ, ವೀರಶೈವ ಸಾಹಿತ್ಯದ ಸಂಶೋಧನೆ, ಪ್ರಕಾರಗಳು ಮತ್ತು ಕನ್ನಡ ಸಾಹಿತ್ಯದಲ್ಲಿ ವೀರಶೈವ ಸಾಹಿತ್ಯದ ಪ್ರಭಾವ ಮತ್ತು ಧಾರ್ಮಿಕ ಕೃತಿಗಳ ಕೊಡುಗೆಗಳ ಬಗ್ಗೆ ಹೆಚ್ಚು ಪ್ರಚುರಪಡಿಸುವ ಸದುದ್ದೇಶದಿಂದ ಪಂಚಪೀಠಾಧೀಶ್ವರರನ್ನು ಹಿನ್ನಲೆ ಇಟ್ಟುಕೊಂಡು ಈ ನಿರಂತರ ದತ್ತಿ ಉಪನ್ಯಾಸ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ರಂಭಾಪುರಿ ಜಗದ್ಗುರುಗಳ ಮತ್ತು ಧಾರವಾಡದಲ್ಲಿ ಶ್ರೀಶೈಲ ಜಗದ್ಗುರುಗಳ ಕುರಿತು ದತ್ತಿ ನಿಧಿಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಗಿವೆ.
ಈಗ ನವಲಗುಂದ ತಾಲ್ಲೂಕಿನಲ್ಲಿ ಉಜ್ಜಯಿನಿ ಜಗದ್ಗುರುಗಳ ಕಾರ್ಯಕ್ರಮವನ್ನು ಬರುವ ನವೆಂಬರ್ 19 ರಂದು ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಸಾಪ ನವಲಗುಂದ ತಾಲೂಕಾ ಅಧ್ಯಕ್ಷ ಸಿದ್ದಯ್ಯ ಹಿರೇಮಠ ಮಾತನಾಡಿ, ಜಗದ್ಗುರುಗಳ ಸಾಹಿತ್ಯ, ಧಾರ್ಮಿಕ ಮತ್ತು ಸಾಂಸ್ಕøತಿಕ ಕೊಡುಗೆಗಳ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತದೆ. ಜಿಲ್ಲಾ ಅಧ್ಯಕ್ಷ ಡಾ.ಎಲ್.ಆರ್. ಅಂಗಡಿ ಮಾರ್ಗದರ್ಶನದಲ್ಲಿ ಈ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕಿನಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತದೆ. ವೀರಶೈವ ಲಿಂಗಾಯತ ಸಾಧಕರನ್ನು ಪರಿಚಯಿಸುವ ಮತ್ತು ಪಂಚಪೀಠಗಳ ಪರಂಪರೆ, ಸಾಹಿತ್ಯದ ಬಗ್ಗೆ ಸಾರ್ವಜನಿಕರಿಗೆ ವಿಶೇಷ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಇಂತಹ ಕಾರ್ಯಕ್ರಮಗಳ ಮೂಲಕ ಕಸಾಪ ನವಲಗುಂದ ಘಟಕವು ಕ್ರಿಯಾಶೀಲವಾಗಿ ತನ್ನನ್ನು ಸಾಹಿತ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.
ನೀಲಯ್ಯ.ಎಸ್. ತಾಳಿಕೋಟಿಮಠ ಅವರು ಮಾತನಾಡಿ, ನ.19 ರಂದು ನವಲಗುಂದ ಪಟ್ಟಣದಲ್ಲಿ ಉಜ್ಜಯಿನಿ ಜಗದ್ಗುರುಗಳ ಉತ್ಸವ ಮಾಡಲಾಗುತ್ತದೆ. ಕಸಾಪ ನೇತೃತ್ವದಲ್ಲಿ ಎಲ್ಲ ಸಮಾಜಗಳ ಭಕ್ತರು, ಸಾರ್ವಜನಿಕರು ಸೇರಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಪೂಜ್ಯರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಾಗಿ ಹೇಳಿದರು.
ಜಂಗಮ ಸಂಸ್ಥೆಯ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ ಅವರು ಮಾತನಾಡಿ, ನವಲಗುಂದ ತಾಲೂಕು ಸಾಹಿತ್ಯ, ಧರ್ಮ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ತಾಲೂಕಿನ ಐತಿಹಾಸಿಕತೆಗೆ ಈ ಕಾರ್ಯಕ್ರಮ ಮೆರಗು ನೀಡುತ್ತದೆ. ಎಲ್ಲರೂ ಸೇರಿ, ಗ್ರಾಮೀಣರನ್ನು ಸೇರಿಸಿಕೊಂಡು ಸಂಘಟಿಸೋಣ ಎಂದರು.
ಮುಖಂಡರಾದ ಎಂ.ಡಿ. ಕುಲಕರ್ಣಿ ಅವರು ಮಾತನಾಡಿ, ಹಳ್ಳಿ, ಹಳ್ಳಿಗಳಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಿ, ಸಂಘಟಿತರಾಗೋಣ. ಇಂದು ಸಮಾಜದ ಸಂಘಟಣೆ, ಏಕತೆ ಅಗತ್ಯವಾಗಿದೆ. ಮುಂದಿನ ಭವಿಷ್ಯದ ವೀರಶೈವ ಲಿಂಗಾಯತ ಸಮಾಜ ಸದೃಢವಾಗಬೇಕು. ಈ ನಿಟ್ಟಿನಲ್ಲಿ ಒಗ್ಗಟ್ಟು ತೋರೋಣ ಎಂದರು.
ಸಭೆಯಲ್ಲಿ ಕಾರ್ಯಕ್ರಮ ಸಿದ್ದತೆಗಳ ಕುರಿತು ಕೊಟ್ರಯ್ಯ ಹಿರೇಮಠ, ರಾಚಯ್ಯ ಕೋರಿಮಠ, ಡಾ.ಶರ್ಮಾ ಹಿರೇಮಠ, ಎಸ್.ಎಂ.ಮೆಣಸಿನಕಾಯಿ, ಶರಣಯ್ಯ ಹಿರೇಮಠ ಮಾತನಾಡಿದರು.
ಸಭೆಯಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕರಾದ ಪ್ರೊ.ಜಗದೀಶ ಕಾಡದೇವರಮಠ, ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ, ಖಜಾಂಚಿ ಪಂಚಾಕ್ಷರಯ್ಯ ಹಿರೇಮಠ, ಸುಮಿತಾ ಹಿರೇಮಠ ಹಾಗೂ, ಎಸ್.ಜಿ. ಹಿರೇಮಠ, ಕೊಟ್ರಯ್ಯ ಹಿರೇಮಠ, ಶಂಬಯ್ಯ ಕೇರಿಮಠ, ವಾಯ್.ಎಫ್. ಕೆಂಪಣ್ಣವರ, ಸಿದ್ದಯ್ಯ ಹಿರೇಮಠ, ಈರಯ್ಯ ಜಾವೂರಮಠ, ಡಾ.ಎಸ್.ಎಸ್. ಹಿರೇಮಠ, ಅಕ್ಷಯ ಡೋಣುರಮಠ ಮತ್ತು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸೇರಿದಂತೆ ಇತರರು ಇದ್ದರು.
ಕಸಾಪ ಪದಾಧಿಕಾರಿ ಪ್ರೊ. ಬಿ.ಎಚ್. ಹೂಗಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಯ್ಯ ಹಿರೇಮಠ ನಿರೂಪಿಸಿದರು