ಬೆಂಗಳೂರು, ಅಕ್ಟೋಬರ್ 04 (ಕರ್ನಾಟಕ ವಾರ್ತೆ) :
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 58ನೇ ಸಂಸ್ಥಾಪನಾ ದಿನಾಚರಣೆಯನ್ನು ಅಕ್ಟೋಬರ್ 05ರಂದು ಬೆಳಿಗ್ಗೆ 10-30 ಗಂಟೆಗೆ, ಜಿ.ಕೆ.ವಿ.ಕೆ ಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ವಿಶ್ರಾಂತ ಉಪ ಮಹಾ ನಿರ್ದೇಶಕರು, ಅಂತಾರಾಷ್ಟ್ರೀಯ ಅರೆ-ಶುಷ್ಕ ಉಷ್ಣವಲಯ ಬೆಳೆಗಳ ಸಂಶೋಧನಾ ಸಂಸ್ಥೆ, ಹೈದರಾಬಾದ್ ಮತ್ತು ಸಹ ಸಂಸ್ಥಾಪಕರು, ಜಿ.ಆರ್.ಎಸ್.ವಿ. ಸಲಹಾ ಸೇವೆಗಳು, ಮೈಸೂರು ಡಾ: ಸಿ.ಎಲ್. ಲಕ್ಷ್ಮೀಪತಿಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶರವರು ವಹಿಸಲಿದ್ದಾರೆ.ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಡಾ. ಕಾಳಯ್ಯ ಕೃಷ್ಣಮೂರ್ತಿ, ರಾಷ್ಟ್ರೀಯ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಶಸ್ತಿ, ನಾಗಮ್ಮ ದತ್ತಾತ್ರೇಯ ರಾವ್ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಮೆ. ಜುವಾರಿ ಇಂಡಸ್ಟ್ರೀಸ್ ಲಿಮಿಟೆಡ್ ಅತ್ಯುತ್ತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ಮತ್ತು ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.