Site icon MOODANA Web Edition

ಗರಕ ಕ್ಷೇತ್ರೀಯ ಸೇವಾ ಸಂಘಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಪ್ರದಾನಸರಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧೀಜಿಯವರ ಚಿಂತನೆಗಳೇ ಪ್ರೇರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 02 (ಕರ್ನಾಟಕ ವಾರ್ತೆ) :

ನಮ್ಮ ಸರಕಾರದ ಅನುಷ್ಠಾನಗೊಳಿಸಿರುವ ಜನಪರ ಕಾರ್ಯಕ್ರಮಗಳಿಗೆ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಚಿಂತನೆಗಳೇ ಪ್ರೇರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕಿನ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಹಿಳೆಯರ ಸಬಲೀಕರಣಕ್ಕೆ ಮತ್ತು ಅವರ ಸ್ವಾವಲಂಭಿ ಮತ್ತು ನೆಮ್ಮದಿಯುತ ಜೀವನದ ಬಗ್ಗೆ ಅಪಾರ ಬದ್ಧತೆಯನ್ನು ಮಹಾತ್ಮಗಾಂಧೀಜಿ ಅವರು ಇಟ್ಟುಕೊಂಡಿದ್ದರು;ಅವರು ಅಭಿವೃದ್ಧಿಯಾಗದೇ ದೇಶ ಅಭಿವೃದ್ಧಿಯಾಗದು ಎಂದರಿತಿದ್ದರು. ಗಾಂಧೀಜಿಯವರ ಈ ಚಿಂತನೆಯೇ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಮತ್ತು ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ಒದಗಿಸುವ ಗೃಹಲಕ್ಷ್ಮೀ ಯೋಜನೆ, ಹಸಿವುಮುಕ್ತ ಕಲ್ಪನೆಯ ಅನ್ನಭಾಗ್ಯ ಯೋಜನೆಗಳು ಜಾರಿಗೆ ತರಲು ಪ್ರೇರಣೆ ಎಂದರು.

ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ; ಅವರು ಜೀವನದುದ್ದಕ್ಕೂ ದೇಶದಲ್ಲಿ ಶಾಂತಿ-ಸಾಮರಸ್ಯ-ಸೌಹಾರ್ದತೆಗೆ ಶ್ರಮಿಸಿದ್ದರು ಎಂದು ಸ್ಮರಿಸಿದ ಸಿಎಂ ಸಿದ್ದರಾಮಯ್ಯ ಅವರು, ಆಹಿಂಸಾ ಮಾರ್ಗದ ಮೂಲಕವೇ ಒಂದು ದೇಶ ಸ್ವಾತಂತ್ರ್ಯ ಪಡೆಯಬಹುದು ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ ಅವರಾಗಿದ್ದಾರೆ ಎಂದರು.

ಮನುಷ್ಯ-ಮನುಷ್ಯನನ್ನು ಪ್ರೀತಿಸುವುದನ್ನು ಕಲಿಯಬೇಕು. ಮಹಾತ್ಮಗಾಂಧೀಜಿ ಅವರ ಚಿಂತನೆಗಳು ಮತ್ತು ತತ್ವಾದರ್ಶಗಳ ಹಾದಿಯಲ್ಲಿ ನಡೆಯಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರೇ ಅದುವೇ ಅವರಿಗೆ ತೋರುವ ನಿಜವಾದ ಗೌರವ ಎಂದರು.

ಗಾಂಧೀಜಿ ಒಬ್ಬರೇ ದೇಶಕ್ಕೆ ಮಹಾತ್ಮ;ಅವರನ್ನು ಹೊರತುಪಡಿಸಿದರೇ ಯಾರು ಸಹ ಮಹಾತ್ಮರಾಗಲು ಸಾಧ್ಯವಿಲ್ಲ ಎಂದರು.

ಖಾದಿ ಉತ್ಪನ್ನ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವ ಹಾಗೂ ಇಡೀ ದೇಶಕ್ಕೆ ರಾಷ್ಟ್ರಧ್ವಜಗಳನ್ನು ಪೂರೈಸುವ ಕೆಲಸದಲ್ಲಿ ಅತ್ಯಂತ ಬದ್ಧತೆಯಿಂದ ತೊಡಗಿಸಿಕೊಂಡಿರುವ ಗರಗ ಕ್ಷೇತ್ರೀಯ ಸೇವಾ ಸಂಘದ 7 ದಶಕಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ ಹಿರಿಯ ವಿಶ್ರಾಂತ ನ್ಯಾಯಮೂರ್ತಿ ಎಂ.ವೀರಪ್ಪ ನೇತೃತ್ವದ ಆಯ್ಕೆ ಸಮಿತಿಗೆ ಅಭಿನಂದನೆ ಸಲ್ಲಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಗ ಕ್ಷೇತ್ರೀಯ ಸೇವಾ ಸಂಘವು ಇನ್ನಷ್ಟು ಸ್ಪೂರ್ತಿಯುತವಾಗಿ ಕೆಲಸ ಮಾಡಲಿ;ಅವರ ಸೇವೆ ಗುರುತಿಸಿ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಆಶಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಎನ್.ಜಯರಾಂ ಅವರು ಮಾತನಾಡಿ, ಗಾಂಧೀಜಿ ವಿಚಾರಧಾರೆಗಳನ್ನು ನಾಡಿನಾದ್ಯಂತ ಪ್ರಚುರಪಡಿಸುವ ಸದುದ್ದೇಶದಿಂದ ಎಲ್ಲ ಜಿಲ್ಲೆಗಳಲ್ಲಿ ತಲಾ 3 ಕೋಟಿ ರೂ.ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ;ಈಗಾಗಲೇ 7 ಜಿಲ್ಲೆಗಳಲ್ಲಿ ಗಾಂಧಿಭವನಗಳ ನಿರ್ಮಾಣ ಪೂರ್ಣಗೊಂಡಿವೆ ಎಂದರು.

ನಮ್ಮ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಮೂಲಕ ಮದ್ಯಪಾನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮಹಾತ್ಮಗಾಂಧೀಜಿ ಅವರ 154ನೇ ಜಯಂತಿ ನಿಮಿತ್ತ ರಾಜ್ಯಾದ್ಯಂತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದು ಅವರು ಹೇಳಿದರು.

ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 5ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
*ಅರ್ಜಿ ಸಲ್ಲಿಸದೇ ಪ್ರಶಸ್ತಿಗೆ ಆಯ್ಕೆ: ಖಾದಿ ಉತ್ಪನ್ನ ಮತ್ತು ಮಾರಾಟ ಹಾಗೂ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಅತ್ಯಂತ ಬದ್ಧತೆಯಿಂದ ಕಳೆದ 7 ದಶಕಗಳಿಂದ ತೊಡಗಿಸಿಕೊಂಡಿರುವ ಗರಗ ಕ್ಷೇತ್ರೀಯ ಸೇವಾ ಸಂಘವು ಅರ್ಜಿ ಸಲ್ಲಿಸದೇ ಪ್ರಶಸ್ತಿಗೆ ಆಯ್ಕೆಯಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಬಿ.ವೀರಪ್ಪ, ಸದಸ್ಯರಾದ ದಿನೇಶ ಅಮಿನ್‍ಮಟ್ಟು, ಧರಣಿದೇವಿ, ವೂಡೇ.ಪಿ.ಕೃಷ್ಣ ಅವರ ನೇತೃತ್ವದ ಸಮಿತಿಯ ಎದುರುಗಡೆ ಒಟ್ಟು 18 ವ್ಯಕ್ತಿಗಳು ಹಾಗೂ 12 ಸಂಸ್ಥೆಗಳ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸುವುದರ ಜೊತೆಗೆ ಅರ್ಜಿ ಸಲ್ಲಿಸದೇ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಖಾದಿ ಉತ್ಪನ್ನ ಮತ್ತು ಮಾರಾಟ ಹಾಗೂ ರಾಷ್ಟ್ರಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಗರಗ ಕ್ಷೇತ್ರೀಯ ಸೇವಾ ಸಂಘದ ಕಾರ್ಯವನ್ನು ಗುರುತಿಸಿ ಇದೇ ಸಂಘವನ್ನು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಒಮ್ಮತದಿಂದ ಆಯ್ಕೆ ಮಾಡಲಾಯಿತು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಬಿ.ವೀರಪ್ಪ ಅವರು ತಿಳಿಸಿದರು.

ಪ್ರಶಸ್ತಿ ದೊರಕಿರುವುದು ನೂಲುವ ಮತ್ತು ನೇಯುವವರಿಗೆ ಸಂದ ಗೌರವವಾಗಿದ್ದು,ಅತ್ಯಂತ ಅಭಿಮಾನದಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದಾಗಿ ಗರಗ ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷರಾದ ಬಸವಪ್ರಭು ಹೊಸಕೇರಿ ಅವರು ತಿಳಿಸಿದರು.

1 ಮೀಟರ್ ಬಟ್ಟೆಗೆ ನೀಡುತ್ತಿರುವ ಪ್ರೋತ್ಸಾಹಧವನ್ನು 7 ರೂ.ಗಳಿಂದ 10 ರೂ ಹಾಗೂ ಲಾಡಿ ನೂಲಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 3 ರೂ.ಗಳಿಂದ 5 ರೂ.ಗೆ ಹೆಚ್ಚಿಸುವಂತೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಅವರು ತುಂಡು ಬಟ್ಟೆಯಾಗಿ ಖಾದಿಯನ್ನು ನೋಡದೇ ತತ್ವವಾಗಿ ಖಾದಿ ನೋಡಿ ಉಳಿಸಿ ಬೆಳೆಸಬೇಕು ಎಂದು ಅವರು ಕೋರಿಕೊಂಡರು.

ಇದೇ ಸಂದರ್ಭದಲ್ಲಿ ಗರಗ ಕ್ಷೇತ್ರೀಯ ಸೇವಾ ಸಂಘದ ಪ್ರಮುಖರಾದ ಈಶ್ವರ ಇಟಗಿ,ರಾಜೇಶ ಕಳಸಗಾರ್ ಹಾಗೂ ನೂಲುವ ಮಹಿಳೆಯರು ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಅವರು ಮಾತನಾಡಿ,ಗಾಂಧೀಜಿ ವಿಚಾರಧಾರೆಗಳನ್ನು ನಾಡಿನ ಮನೆ-ಮನಕ್ಕೂ ತಲುಪಿಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ವರ್ಷ ಗಾಂಧೀಜಿ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ;ಬರುವ ವರ್ಷಗಳಲ್ಲಿ ಈ ಸಂಖ್ಯೆಯನ್ನು ಲಕ್ಷಕ್ಕೇರಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕøತರ ವಿವರವನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಗಾಯಕಿ ಚಂದ್ರಿಕಾ ಗುರುರಾಜ್ ಮತ್ತು ತಂಡದವರಿಂದ ಗಾಂಧಿ ಪ್ರಿಯ ಗೀತೆಗಳ ಗಾಯನ ಜರುಗಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಧರಣಿದೇವಿ,ಕಸಾಪ ರಾಜ್ಯಾಧ್ಯಕ್ಷರಾದ ಡಾ.ಮಹೇಶ ಜೋಶಿ,ಹಿರಿಯ ಪತ್ರಕರ್ತರಾದ ದಿನೇಶ ಅಮಿನ್ ಮಟ್ಟು, ಇಂದೂಧÀರ್ ಹೊನ್ನಾಪುರ,ಸಾಹಿತಿ ಈರಪ್ಪ ಕಂಬಳಿ ಸೇರಿದಂತೆ ಹಿರಿಯ ಅಧಿಕಾರಿಗಳು,ಗಣ್ಯರು ಉಪಸ್ಥಿತರಿದ್ದರು

Exit mobile version